ADVERTISEMENT

ಮುತ್ತು ಕಟ್ಟಿಸಿಕೊಂಡವರ ಕಣ್ಣೀರ ಬದುಕು

ಸಂಧ್ಯಾ ಹೆಗಡೆ
Published 16 ಜುಲೈ 2017, 9:56 IST
Last Updated 16 ಜುಲೈ 2017, 9:56 IST

ಶಿರಸಿ: ಅರಿವಿಲ್ಲದೇ ಬಂದ ಮುಳ್ಳಿನ ಪಟ್ಟವನ್ನು ಅನಿವಾರ್ಯವಾಗಿ ಒಪ್ಪಿ ಕೊಂಡು ಜೀವನ ನಿರ್ವಹಣೆ ಮಾಡು ತ್ತಿರುವ ಈ ಮಹಿಳೆಯರು, ನಿತ್ಯರಾತ್ರಿ ಕಣ್ಣೀರು ಹಾಕಿ ಮನದ ದುಗುಡ ಮರೆಯುತ್ತಾರೆ. ಮರುದಿನ ಬೆಳಗಾದರೆ ಮತ್ತೆ ಹೊಟ್ಟೆಪಾಡಿಗಾಗಿ ಕೆಲಸ ಅರಸುತ್ತ ಅಷ್ಟಿಷ್ಟು ಗಳಿಸಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದಾರೆ. ದೇವದಾಸಿ ಪಟ್ಟ ಹೊತ್ತಿರುವ ತಾಲ್ಲೂಕಿನ ಬನವಾಸಿ ಭಾಗದ ಕೆಲವು ಮಹಿಳೆಯರ ಗೋಳಿನ ಕಥೆಯಿದು.

‘ಅಪ್ಪ– ಅಮ್ಮ ಇಲ್ಲದ ನನಗೆ 15ನೇ ವರ್ಷಕ್ಕೆ ಮುತ್ತು ಕಟ್ಟಿದರು. ಬದುಕು ನರಕವಾಯಿತು, ಪ್ರತಿದಿನವನ್ನೂ ಕಷ್ಟದಲ್ಲಿಯೇ ಕಳೆದೆ. ಮೂರು ಮಕ್ಕಳು ಹುಟ್ಟಿದರು. ಅವರನ್ನು ಸಾಕುವುದೇ ದೊಡ್ಡ ಸವಾಲಾಗಿ ಆತ್ಮಹತ್ಯೆ ಮಾಡಿ ಕೊಳ್ಳುವ ಮನಸ್ಸಾಯಿತು. ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಮಕ್ಕಳನ್ನು ಬೆಳೆಸಿ ಹಾಸ್ಟೆಲ್‌ನಲ್ಲಿಟ್ಟು ಓದಿಸಿದೆ.

ಮಕ್ಕಳಿಗೆಲ್ಲ ಮದುವೆಯಾಗಿದೆ. ಮಧು ಕೇಶ್ವರ ದೇವಾಲಯದಲ್ಲಿ ಸೇವೆ ಮಾಡುವ ಜೊತೆಗೆ ನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ದೇವಾಲ ಯದಿಂದ ನನಗೆ ಅಧಿಕೃತ ಪ್ರಮಾಣ ಪತ್ರ ದೊರೆತಿದ್ದರೂ ವೃದ್ಧಾಪ್ಯ ವೇತನ ಹೊರತುಪಡಿಸಿ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ’ ಎಂದು ಅಲವತ್ತು ಕೊಂಡರು 63 ವರ್ಷದ ಹಿರಿಯ ಮಹಿಳೆಯೊಬ್ಬರು.

ADVERTISEMENT

‘ನಾನು ಎರಡನೇ ಕ್ಲಾಸ್‌ನಲ್ಲಿದ್ದಾಗ ಮುತ್ತು ಕಟ್ಟಿದ್ರು. ಈಗ ನಮ್ ಅಪ್ಪಾರ್ ಇಲ್ರಿ, ನಾನು ತಾಯಿ ಕೂಡೇ ಅದೇವಿ. ಒಬ್ಬ ಸಣ್ಣ ಮಗಾ ಅದಾನ್. ಒಂದು ಮನಿ ಬಿಟ್ರ ಹಿಡಿ ಜಾಗಾ ಇಲ್ರಿ’ ಎಂದ ವರು ಇನ್ನೊಬ್ಬ 35 ವರ್ಷದ ಮಹಿಳೆ. ‘ನಂಗ ಯಾರೂ ಇಲ್ರಿ ಬದುಕು ಭಾಳ್ ಕಷ್ಟ. ಮನೀನೂ ಮುರಿದು ಬೀಳೋಹಂಗ ಆಗೇತಿ. ವಾರಕ್ಕೆರಡ ದಿನ ಭಿಕ್ಷಾ ಬೇಡಿ ಜೀವನಾ ಮಾಡ್ತೇನಿ’ ಎನ್ನುವಾಗ ಮತ್ತೊಬ್ಬ ಮಹಿಳೆಯ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು.

ಸಮೀಕ್ಷೆಯೇ ನಡೆದಿಲ್ಲ: ‘ರಾಜ್ಯದಲ್ಲಿ 1993–94ರಲ್ಲಿ ನಡೆದ ಸಮೀಕ್ಷೆಯಲ್ಲಿ ಕೇವಲ 22,800 ದೇವದಾಸಿಯರನ್ನು ಗುರುತಿಸಲಾಗಿತ್ತು. 2007–08ರಲ್ಲಿ ಮತ್ತೆ ಸಮೀಕ್ಷೆ ನಡೆಸಿದಾಗ 46 ಸಾವಿರ ದೇವದಾಸಿಯರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಇನ್ನೂ ಹಲವರು ಯಾದಿಯಿಂದ ಹೊರಗುಳಿದಿರುವ ಸಾಧ್ಯತೆ ಇದೆ. ಸರ್ಕಾರ ಕೇವಲ 14 ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆ ನಡೆಸಿದೆ. ಎಲ್ಲ ಜಿಲ್ಲೆಗಳಲ್ಲಿ ಈ ಸಮೀಕ್ಷಾ ಕಾರ್ಯ ನಡೆಯಬೇಕು’ ಎಂದು ಒತ್ತಾಯಿಸುತ್ತಾರೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ದೇವದಾಸಿಯರು ಇಲ್ಲವೆಂಬ ನೆಪವೊಡ್ಡಿ ಸರ್ಕಾರ ಈ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಿಲ್ಲ. ಬನವಾಸಿ ಭಾಗದಲ್ಲಿ ಮುತ್ತು ಕಟ್ಟಿಸಿಕೊಂಡ ನಾಲ್ವರು ಮಹಿಳೆಯರು ತೀರಾ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂತಹ ಇನ್ನಷ್ಟು ಮಹಿಳೆಯರು ಇರುವ ಸಾಧ್ಯತೆ ಇದೆ. ಅವರನ್ನು ಗುರುತಿಸಿ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಬೇಕು’  ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* * 

ರಾಜೀವ್‌ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಫಲಾ ನುಭವಿ ಗಳಿಗೆ ಮನೆ ನೀಡುವ ಸಂಬಂಧ ಇತ್ತೀಚೆಗಷ್ಟೇ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ದೇವದಾಸಿಯರು ಇಲ್ಲ. ಜೋಗತಿಯರು ಮಾತ್ರ ಇದ್ದಾರೆ
ರಾಜೇಂದ್ರ ಬೇಕಲ್‌
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.