ADVERTISEMENT

ವಾರದಲ್ಲಿ ಕೆರೆ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:55 IST
Last Updated 24 ಮೇ 2017, 9:55 IST

ಶಿರಸಿ: ಸಾರ್ವಜನಿಕೆ ವಂತಿಗೆ ಹಣದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ನಡೆಸುತ್ತಿರುವ ರಾಯರ ಕೆರೆಯ ಹೂಳೆತ್ತುವ ಕಾಮಗಾರಿ ಶೇ 80ರಷ್ಟು ಮಗಿದಿದ್ದು, ಇನ್ನು ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ.

ಮಂಗಳವಾರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಕೆರೆ ಕಾಮಗಾರಿ ವೀಕ್ಷಿಸಿದರು. ನಗರದ ಕೆರೆಗಳ ಅಭಿವೃದ್ಧಿಗೆ ಸಾರ್ವಜನಿಕರು ಕೈ ಜೋಡಿಸಿದ್ದರಿಂದ ಯಶಸ್ಸು ದೊರೆತಿದೆ. ಹಾಲುಹೊಂಡ ಕೆರೆಗೆ ಈ ವರ್ಷ ₹ 6 ಲಕ್ಷ  ಅನುದಾನ ಮಂಜೂರು ಆಗಿದೆ. ಬೆಳ್ಳಕ್ಕಿ ಕೆರೆ ಅಭಿವೃದ್ಧಿಗೆ ಕೆಲ ಕಾನೂನು ತೊಡಕುಗಳಿರುವುದರಿಂದ ವಿಳಂಬವಾಗಿದೆ. ಇದರ ಹೊರತಾಗಿ ನಗರದ ಉಳಿದೆಲ್ಲ ಕೆರೆಗಳು ಅಭಿವೃದ್ಧಿಯಾದಂತಾಗಿವೆ ಎಂದರು.

ರಾಯರ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ದುಬಾಶಿ ಮಾಹಿತಿ ನೀಡಿ ‘3.26 ಎಕರೆ ಪ್ರದೇಶದಲ್ಲಿರುವ ರಾಯರ ಕೆರೆ ಅಭಿವೃದ್ಧಿಗೆ ₹ 40 ಲಕ್ಷ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಅನೇಕರು ಸ್ವಂತ ವಾಹನದಲ್ಲಿ ಮಣ್ಣನ್ನು ಕೊಂಡೊಯ್ಯುತ್ತಿರುವುದರಿಂದ ಸುಮಾರು ₹ 15 ಲಕ್ಷ ವೆಚ್ಚ ಕಡಿಮೆಯಾಗಿದೆ. 33 ದಿನಗಳಿಂದ ಪ್ರತಿ ದಿನ 2 ಹಿಟಾಚಿ, 1 ಜೆಸಿಬಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ.

ADVERTISEMENT

6ರಿಂದ 8 ಟಿಪ್ಪರ್‌ಗಳು ಕಾರ್ಯ ನಿರ್ವಹಿಸಿ ಸುಮಾರು 8 ಸಾವಿರ ಲೋಡ್ ಮಣ್ಣನ್ನು ಇಲ್ಲಿಂದ ಸಾಗಿಸಿವೆ. ಕೆರೆ ಮಧ್ಯದಲ್ಲಿ ಮಣ್ಣಿನ ದಿಬ್ಬವನ್ನು ಬಿಡಲಾಗಿದ್ದು, ಗಿಡ ಬೆಳೆಸಿ ಹಕ್ಕಿ, ಪಕ್ಷಿಗಳಿಗೆ ಆಸರೆ ಒದಗಿಸಲಾಗುವುದು’ ಎಂದರು.

‘ಕೆರೆಯ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವಂತೆ ಈ ಭಾಗದಲ್ಲಿ ನಿವೇಶನ ಹೊಂದಿರುವ ಹೊರ ಊರುಗಳಲ್ಲಿ ಉದ್ಯೋಗದಲ್ಲಿರುವವರ ವಿಳಾಸ ಸಂಗ್ರಹಿಸಿ ಸಂಪರ್ಕಿಸಲು ಪ್ರಯತ್ನ ನಡೆಸಲಾಗಿದೆ. ಸ್ಥಳೀಯರು ನೀಡಿರುವ ಹಣ ₹ 4 ಲಕ್ಷ ತಲುಪಿದೆ. ಸ್ಥಳೀಯ ಉತ್ಸಾಹಿಗಳು ಮನೆ ಮನೆ ಸಂಪರ್ಕಿಸಿ ಕೆರೆಗೆ ನೆರವು ನೀಡುವಂತೆ ವಿನಂತಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘10 ಅಡಿ ಆಳಗೊಳಿಸಿರುವುದರಿಂದ ಕೆರೆಯ ಸುತ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ದನಕರುಗಳು, ಮನುಷ್ಯರು ಆಕಸ್ಮಿಕವಾಗಿ ಜಾರಿ ಕೆರೆಗೆ ಬೀಳದಂತೆ ರಕ್ಷಣಾ ಬೇಲಿ ನಿರ್ಮಿಸಬೇಕು. ಶಾಸಕರ ಅನುದಾನ ಅಥವಾ ಇನ್ನಾವುದಾರೂ ನಿಧಿಯಲ್ಲಿ ಇವುಗಳ ಕಾಮಗಾರಿ ನಡೆಸಲಾಗುವುದು.

ನೀಲನಕ್ಷೆ ಸಿದ್ಧಪಡಿಸುವಂತೆ ನಗರಸಭೆಗೆ ತಿಳಿಸಲಾಗಿದೆ’ ಎಂದು ಹೇಳಿದರು. ಪೌರಾಯುಕ್ತ ಮಹೇಂದ್ರ ಕುಮಾರ, ಪ್ರಮುಖರಾದ ಡಾ. ಶಿವರಾಮ ಕೆ.ವಿ, ಅನಿಲ್ ನಾಯಕ, ರಾಕೇಶ ತಿರುಮಲೆ, ಗಣಪತಿ ನಾಯ್ಕ, ಶ್ಯಾಮಸುಂದರ ಭಟ್, ಕೆ. ರಿತೇಶ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.