ADVERTISEMENT

ವಿವೇಕ ಬ್ಯಾಂಡ್: 14 ದಿನದ ಅಭಿಯಾನ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:36 IST
Last Updated 10 ಜನವರಿ 2017, 5:36 IST
ಶಿರಸಿ: ಸ್ವಾಮಿ ವಿವೇಕಾನಂದರ ‘ಉತ್ತಮ­ನಾಗು- ಉಪಕಾರಿಯಾಗು’ ಸಂದೇಶ ಸಾರುವ ಆಶಯದೊಂದಿಗೆ ವಿವೇಕ ಬ್ಯಾಂಡ್ ಅಭಿಯಾನ ಹಮ್ಮಿಕೊಳ್ಳ­ಲಾಗಿದೆ. ಇದೇ 12ರಿಂದ 26ರವರೆಗೆ ನಡೆಯುವ ಅಭಿಯಾನದ ಭಾಗವಾಗಿ ಇದೇ 10ರ ಸಂಜೆ 3.30 ಗಂಟೆಗೆ ನೆಮ್ಮದಿ ಕುಟೀರದಲ್ಲಿ ವಿವೇಕ ಬ್ಯಾಂಡ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 
 
-ಅಭಿಯಾನದ ವಿಭಾಗ ಸಂಚಾಲಕ ಗುರುಪ್ರಸಾದ ಹೆಗಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಜ.12ರಂದು ಸ್ವಾಮಿ ವಿವೇಕಾನಂದರ 154 ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಮರ್ಥ ಭಾರತ ಸಂಘಟನೆ ರಾಜ್ಯದಾದ್ಯಂತ ಈ ಅಭಿಯಾನ ಆಯೋಜಿಸಿದೆ. ಅಭಿಯಾನದ ಅವಧಿಯಲ್ಲಿ ಯುವ ಜನರು ವಿವೇಕ ಬ್ಯಾಂಡ್ ಧರಿಸಲಿದ್ದಾರೆ. ವಿವಿಧ ವರ್ಣಗಳಲ್ಲಿ ಸಿದ್ಧವಾಗಿರುವ ವಿವೇಕ ಬ್ಯಾಂಡ್ ಅನ್ನು ₹10ಕ್ಕೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ. ಬ್ಯಾಂಡ್ ಅನ್ನು ಪ್ರತಿಯೊಬ್ಬರೂ ಖರೀದಿಸಿ ಧರಿಸುವ ಜೊತೆಗೆ, ಇತರರನ್ನು ಪ್ರೇರೇಪಿ­ಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.
 
ಹೆಚ್ಚಿನ ಯುವ ಜನರನ್ನು ಸ್ಫೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಇತರರಿಗೆ ಆದರ್ಶ ವ್ಯಕ್ತಿಗಳಾಉವ ಪರಂಪರೆ­ಯನ್ನು ನಿರ್ಮಿಸುವ ಆಶಯವನ್ನು ಅಭಿಯಾನ ಹೊಂದಿದೆ. ಈ ವರ್ಷ ಅಭಿಯಾನವು ಭಾರತ ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳಲ್ಲಿ ಒಂದಾಗಿರುವ ‘ಕಾರ್ನಿಯಾ ಅಂಧತ್ವ’ದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಜತೆಗೆ ನೇತ್ರದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ. ನೇತ್ರದಾನದ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗುತ್ತಿದೆ ಎಂದರು. ಶಿರಸಿ ನಗರ, ಗ್ರಾಮಾಂತರ, ಮುಂಡಗೋಡ ಸೇರಿ 50ರಷ್ಟು ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ವಕ್ತಾರರು ಭಾಗವಹಿಸಿ ಮಾಹಿತಿ ನೀಡ­ಲಿದ್ದಾರೆ ಎಂದು ಹೇಳಿದರು. ಸುಬ್ರಹ್ಮಣ್ಯ ಹುತ್ಗಾರ, ಸ್ವಾತಿ ಹೆಗಡೆ ಮತ್ತತರರು ಹಾಜರಿದ್ದರು.
 
***
ಜನರು ತಮ್ಮ ವೈಯಕ್ತಿಕ ಜೀವ­ನ­ದಲ್ಲಿ ಉತ್ತಮ ಗುಣ-ಸ್ವಭಾವ ರೂಢಿಸಿಕೊಂಡು ಸೇವಾ ಚಟುವಟಿಕೆ­ಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿ­ಸುವುದು  ಅಭಿಯಾನದ ಉದ್ದೇಶ.
-ಗುರುಪ್ರಸಾದ ಶಾಸ್ತ್ರಿ
ಸ್ಥಳೀಯ ಸಂಚಾಲಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.