ADVERTISEMENT

ಸೂರಜ್‌ ಬಿಡುಗಡೆಗೆ ಆಗ್ರಹ

ಜಿಲ್ಲಾ ಎಸ್‌.ಪಿ. ಯನ್ನು ಭೇಟಿ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 11:13 IST
Last Updated 24 ಮಾರ್ಚ್ 2018, 11:13 IST

ಕಾರವಾರ:  ‘ಹೊನ್ನಾವರದ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ ಅವರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣವನ್ನು ಪುನರ್ ಪರಿಶೀಲನೆ ಮಾಡಬೇಕು, ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ ಪಾಟೀಲ ಅವರನ್ನು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಚರ್ಚಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಕರ್ಕಿ ನಾಕಾದಲ್ಲಿ ಅಕ್ರಮವಾಗಿ ಗೋಸಾಗಣೆ ಮಾಡುತ್ತಿದ್ದವರ ಮೇಲೆ ನಡೆದ ಹ‌ಲ್ಲೆ ಪ್ರಕರಣದಲ್ಲಿ ಸೂರಜ್ ನಾಯ್ಕ ಸೋನಿ ಭಾಗಿಯಾಗಿಲ್ಲ. ಎಲ್ಲಿಗೋ ಹೋದವರು ವಾಪಸ್ ಬರುತ್ತಿದ್ದಾಗ ನಡೆಯುತ್ತಿದ್ದ ಹಲ್ಲೆಯನ್ನು ನೋಡಿದ್ದಾರೆ. ಅಷ್ಟಕ್ಕೇ ಅವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಹರಿಯಾಣಕ್ಕೆ ತೆರಳಿ ದ್ದಾಗ ಕಾರವಾರದ ಜೈಲಿನಲ್ಲಿಡಲಾಗಿದೆ. ಇಂತಹ ಸನ್ನಿವೇಶಗಳನ್ನು ನಾನು ಎಂದೂ ಕಂಡಿರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಕಾರ್ಯಕರ್ತರು ಎನ್ನುವ ಒಂದೇ ಕಾರಣಕ್ಕೆ ಈ ಪ್ರಕರಣದಲ್ಲಿ ಇತರ 150 ಮಂದಿಯ ವಿರುದ್ಧವೂ ದೂರು ದಾಖಲಿಸಲಾಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಈಗಾಗಲೇ ಭೇಟಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಮರು ಮನವಿಗೆ  ಒತ್ತಾಯಿಸಲಾಗಿದೆ. ಅವರು ಪುನರ್ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಮುಖಂಡರಾದ ವಿನೋದ್ ಪ್ರಭು, ಎಂ.ಜಿ.ನಾಯ್ಕ, ವೆಂಕಟ್ರಮಣ ಹೆಗಡೆ, ಡಾ.ಜಿ.ಜಿ.ಹೆಗಡೆ, ಕುಮಾರ ಮಾರ್ಕಾಂಡೆ, ರಾಧಾಕೃಷ್ಣ ಗೌಡ, ನಾಗರಾಜ್ ನಾಯ್ಕ, ಸುನಿಲ್ ಸೋನಿ ಅವರೂ ಇದ್ದರು.

ಜಾನುವಾರನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರ ಮೇಲೆ ಕರ್ಕಿ ನಾಕಾದಲ್ಲಿ ಇದೇ 7ರಂದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ 9ರಂದು ಸೂರಜ್ ನಾಯ್ಕ ಸೋನಿ ಹಾಗೂ ಏಳು ಮಂದಿಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಸಿಕೊಂಡಿದ್ದ ಏಳು ಆರೋಪಿಗಳನ್ನು ಪೊಲೀಸರು ಜಿಲ್ಲೆಯ ವಿವಿಧೆಡೆ ಈ ಮೊದಲೇ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.