ADVERTISEMENT

ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:57 IST
Last Updated 24 ಮೇ 2017, 9:57 IST
ಅಂಕೋಲಾದ ಸುಂಕಸಾಳ-ಡೋಂಗ್ರಿ ಗ್ರಾಮಗಳ ನಡುವೆ ಹಾದು ಹೋಗಿರುವ ಗಂಗಾವಳಿ ನದಿಯಲ್ಲಿ ಬೇಸಿಗೆಯಲ್ಲಿಯೂ ಸಂಚಾರಕ್ಕೆ ಹರಸಾಹಸ ಪಡುತ್ತಿರುವುದು
ಅಂಕೋಲಾದ ಸುಂಕಸಾಳ-ಡೋಂಗ್ರಿ ಗ್ರಾಮಗಳ ನಡುವೆ ಹಾದು ಹೋಗಿರುವ ಗಂಗಾವಳಿ ನದಿಯಲ್ಲಿ ಬೇಸಿಗೆಯಲ್ಲಿಯೂ ಸಂಚಾರಕ್ಕೆ ಹರಸಾಹಸ ಪಡುತ್ತಿರುವುದು   

ಅಂಕೋಲಾ: ಕಳೆದ ಹಲವು ವರ್ಷಗಳಿಂದ ಸೇತುವೆಗಾಗಿ ಗ್ರಾಮಸ್ಥರು ಜನಪ್ರತಿನಿಧಿಗಳನ್ನು, ಅಧಿಕಾರಿ ವರ್ಗದವರನ್ನು ಆಗ್ರಹಿಸುತ್ತಲೇ ಬಂದಿದ್ದರೂ ಕೂಡ ಇನ್ನುವರೆಗೂ ಅವರ ಬೇಡಿಕೆ ಈಡೇರಿಲ್ಲ. ಹೀಗಾಗಿ ಮಳೆಗಾಲದಲ್ಲಿ ಇವರು ಸುತ್ತು ಬಳಸಿಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಡೋಂಗ್ರಿ ಗ್ರಾಮವೇ ಈ ಸಮಸ್ಯೆ ಎದುರಿಸುತ್ತಿರುವುದು. ಡೋಂಗ್ರಿ-ಸುಂಕಸಾಳ ನಡುವೆ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಗ್ರಾಮದಲ್ಲಿ ಸುಮಾರು 250 ಮನೆಗಳಿವೆ. ಇವರು ಅಂಕೋಲಾಕ್ಕೆ ಬರಬೇಕೆಂದರೆ ಸುಮಾರು 50 ಕಿ.ಮೀ. ಕ್ರಮಿಸಿ ಹಿಲ್ಲೂರು ಮಾರ್ಗವಾಗಿ ಕಾಡಿನ ದಾರಿಯಲ್ಲಿ ಆಗಮಿಸಬೇಕಾಗಿದೆ. ಸೇತುವೆಯನ್ನು ನಿರ್ಮಿಸಿದರೆ ಪಟ್ಟಣದ ಅಂತರ 35 ಕಿ.ಮೀ. ಆಗುತ್ತದೆ.

ಇಲ್ಲಿಂದ ಹುಬ್ಬಳ್ಳಿ ಸಮೀಪವಾಗುವುದರಿಂದ ಹಿಲ್ಲೂರ, ಚನಗಾರ, ಅಚವೆ ಹೀಗೆ ಮುಂತಾದ ಗ್ರಾಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗೇ ಹುಬ್ಬಳ್ಳಿ, ಯಲ್ಲಾಪುರ ಕಡೆಯಿಂದ ಯಾಣ ಮತ್ತು ಗೋಕರ್ಣಕ್ಕೆ ಬರುವವರಿಗೆ ಇದು ಹತ್ತಿರದ ದಾರಿಯಾಗಿದೆ.

ADVERTISEMENT

ಮಳೆಗಾಲದಲ್ಲಿ ಗಂಗಾವಳಿ ನದಿಯು ತುಂಬಿ ಹರಿಯುವುದರಿಂದ ಈ ಸಮೀಪದ ದಾರಿಯು ಕಡಿದು ಹೋಗಿ ಸುತ್ತು ಬಳಸಿ ಸಂಚರಿಸುತ್ತಾರೆ. ಆದರೆ ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಇಲ್ಲಿಂದ ಸಂಚರಿಸುತ್ತಾರೆ. ಆದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಇರುವುದರಿಂದ ರಾತ್ರಿ ವೇಳೆಯಲ್ಲಿ ಬೈಕು ದಾಟಿಸುವುದು ಕೂಡ ಕಷ್ಟದಾಯಕವಾಗಿದೆ.

‘ಇಲ್ಲಿ ಸಂಚರಿಸಲು ರಸ್ತೆಗಳಿದ್ದರೂ ಕೂಡ ಸೇತುವೆ ಇಲ್ಲದಿರುವುದರಿಂದ ಜನರ ಪರದಾಟಕ್ಕೆ ಕಾರಣವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ನೀಡುವ ಈ ಸೇತುವೆಯ ಭರವಸೆಯು ನಂತರ ಮಾಯವಾಗುತ್ತದೆ. ಇನ್ನಾದರೂ ಸ್ಥಳಿಯರ ಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ’ ಎಂದು ಮುಖಂಡ ಶಂಕರ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.