ADVERTISEMENT

ಹಳಿ ತಪ್ಪಿದ ಗಾಂಧೀಜಿಯ ಸತ್ಯ, ಅಹಿಂಸೆಯ ಕನಸು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 9:21 IST
Last Updated 26 ಡಿಸೆಂಬರ್ 2017, 9:21 IST

ಸಿದ್ದಾಪುರ: ‘ಗಾಂಧೀಜಿಯವರ ಸತ್ಯ ಹಾಗೂ ಅಹಿಂಸೆಯ ಕನಸು ಇಂದು ಹಳಿ ತಪ್ಪಿದೆ. ಶಾಂತಿ ಹಾಗೂ ಸೌಹಾರ್ದದಿಂದ ಬದುಕುವ ಸ್ಥಿತಿ ಇಲ್ಲವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಧರಣೇಂದ್ರ ಕುರಕುರಿ ವಿಷಾದಿಸಿದರು.

ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಆಶ್ರಯದಲ್ಲಿ ಪಟ್ಟಣದ ಸಿದ್ಧಿ ವಿನಾಯಕ ಶಾಲಾ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಕ್ಷರ ಜಾತ್ರೆ ಹಾಗೂ ವಿವಿಧ ಶಾಲೆಗಳ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಸಮಾಜ ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳಾಗುವುದು ಬೇಡ. ಬಸ್ಸಿಗೆ ಕಲ್ಲು ಹೊಡೆದರೆ, ಆಸ್ತಿ–ಪಾಸ್ತಿ ಹಾನಿ ಮಾಡಿದರೆ ಅದರಿಂದ ಯಾರಿಗೆ ನಷ್ಟ? ಆ ವಸ್ತುಗಳು ನಮ್ಮವು. ಆದ್ದರಿಂದ ಇದೆಲ್ಲ ಯಾಕೆ ಬೇಕು?’ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿದರು.

ADVERTISEMENT

‘ನಾವು ಗಾಂದೀಜಿ ಅವರ ಮೂರು ಮಂಗಗಳಂತೆ ಆಗಬೇಕು. ಗಿಡದಿಂದ ಗಿಡಕ್ಕೆ ಹಾರುವ ಮಂಗ ಆಗುವುದು ಬೇಡ. ಈ ಹಿಂದೆ ನಮ್ಮ ನಡುವೆ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್, ವಲ್ಲಭಬಾಯಿ ಪಟೇಲ್ ಅಂತವರಿದ್ದರು. ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಈ ಜಗತ್ತು ಇರುವುದೇ ತಮಗಾಗಿ ಎಂಬ ಕೀಳು ಮಟ್ಟದಲ್ಲಿ ಯೋಚಿಸುವವರನ್ನು ಕಾಣುತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಂ.ಎ.ಕುಂದಗೋಳ ಮಾತನಾಡಿ,‘ವಿದ್ಯಾರ್ಥಿ ಎಂದರೆ ಜ್ಞಾನವನ್ನು ಬಯಸುವವ ಎಂದರ್ಥ. ವಿದ್ಯಾರ್ಥಿಯಾದವನಿಗೆ ಬಕ ಪಕ್ಷಿಯ ಏಕಾಗ್ರತೆ, ಕಾಗೆಯ ದೃಷ್ಟಿ, ನಾಯಿಯ ನಿದ್ರೆ ಹಾಗೂ ಅಲ್ಪಾಹಾರ ಸೇವನೆ ಇರಬೇಕು’ ಎಂದರು.

ಶಿಕ್ಷಣ ಪ್ರಸಾರಕ ಸಮಿತಿ ನಿರ್ದೇಶಕ ಜಿ.ಕೆ.ಹೆಗಡೆ ಗೋಳಗೋಡು ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಧರಣೇಂದ್ರ ಕುರಕುರಿ ಹಾಗೂ ಡಾ.ಎಂ.ಎ ಕುಂದಗೋಳ ಅವರನ್ನು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ವಿನಾಯಕರಾವ್ ಹೆಗಡೆ ದೊಡ್ಮನೆ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಪಡೆದ ಸಿದ್ಧಿವಿನಾಯಕ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಂತೋಷ ಹೆಗಡೆ ಅವರಿಗೆ ಪುರಸ್ಕಾರ ನೀಡಲಾಯಿತು.

ಶಿಕ್ಷಣ ಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಕೆ.ಐ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಎಲ್. ಹಾಗೂ ಡಾ.ರೂಪಾ ಭಟ್ಟ ಅತಿಥಿಗಳನ್ನು ಪರಿಚಯಿಸಿದರು. ಮಾನಸಾ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.