ADVERTISEMENT

14ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 6:35 IST
Last Updated 9 ಸೆಪ್ಟೆಂಬರ್ 2017, 6:35 IST
14ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ
14ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟ   

ಕಾರವಾರ: ‘ಕಾರ್ಮಿಕರಿಗೆ ಕನಿಷ್ಠ ವೇತನ ₹ 18 ಸಾವಿರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ವತಿಯಿಂದ ಇದೇ 14ರಂದು ಬೆಂಗಳೂರಿನಲ್ಲಿ ಬೃಹತ್‌ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಆರ್‌.ಶಾನಭಾಗ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹೋರಾಟದಲ್ಲಿ ರಾಜ್ಯದ ನಾನಾ ಭಾಗಗಳಿಂದ 2.50 ಲಕ್ಷ ಕಾರ್ಮಿಕರು ಭಾಗವಹಿಸಲಿದ್ದು, ಜಿಲ್ಲೆಯಿಂದ 14 ಸಾವಿರ ಕಾರ್ಮಿಕರು ತೆರಲಿದ್ದಾರೆ’ ಎಂದು ಹೇಳಿದರು.

‘ರಾಜ್ಯದ ಕಾರ್ಖಾನೆಗಳಲ್ಲಿ, ಅಸಂಘಟಿತ ಕ್ಷೇತ್ರದಲ್ಲಿ ಗುತ್ತಿಗೆ ಆಧಾರಿತ ವಾಗಿ ಹಾಗೂ ಸರ್ಕಾರದ ಸಾಮಾಜಿಕ ಯೋಜನೆಗಳಲ್ಲಿ ಕೋಟ್ಯಂತರ ಕಾರ್ಮಿಕರು ದುಡಿಯುತ್ತಿದ್ದಾರೆ. ಕೇಂದ್ರ ಸರ್ಕಾರದ 7ನೇ ವೇತನದ ಆಯೋಗದ ಶಿಫಾರಸುಗಳ ಅನ್ವಯ ಅಕುಶಲ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ವೇತನ ₹ 18 ಸಾವಿರ ನಿಗದಿಪಡಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು.

ADVERTISEMENT

ಈ ವೇತನವು ಏಪ್ರಿಲ್‌ 1, 2017ರಿಂದ ಜಾರಿಗೆ ಬರಬೇಕು. ದೆಹಲಿ ಮಾದರಿಯಲ್ಲಿ ಎಲ್ಲ ಕೈಗಾರಿಕೆಗಳು ಏಕ ಸ್ವರೂಪದ ಕನಿಷ್ಠವೇತನವನ್ನು ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಮಾನ ವೇತನ ನೀಡಲಿ: ‘ರಾಜ್ಯದ ಖಾಸಗಿ ಕ್ಷೇತ್ರದಲ್ಲಿ ಶೇ 60ರಷ್ಟು ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಸುಮಾರು ಶೇ 40ರಷ್ಟು ಕಾರ್ಮಿಕರು ಗುತ್ತಿಗೆ, ಹೊರ ಗುತ್ತಿಗೆ, ದಿನಗೂಲಿ, ಅರೆಕಾಲಿಕವಾಗಿ ದುಡಿಯುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 16, 2016ರಂದು ನೀಡಿ ರುವ ತೀರ್ಪಿನ ಅನ್ವಯ ರಾಜ್ಯ ಸರ್ಕಾರವು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಗೊಳಿಸುವ ಕಾನೂನುಬದ್ಧ ಕ್ರಮಗಳನ್ನು ಜರುಗಿಸ ಬೇಕು. ತಮಿಳುನಾಡು ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಇರುವಂತೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳೀಸಲು ಅನುವಾಗುವಂತೆ ಶಾಸನ ರೂಪಿಸಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಭದ್ರತೆ ಒದಗಿಸಿ: ‘ಅಸಂಘಟಿತ ವಲಯದಲ್ಲಿ 1.25 ಲಕ್ಷ ಮಂದಿ ದುಡಿಯುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಕಲ್ಯಾಣ ಮಂಡಳಿಗಳ ಮೂಲಕ ಭವಿಷ್ಯ ನಿಧಿ ಯೋಜನೆಯನ್ನು ಜಾರಿಗೆ ತರಬೇಕು ಹಾಗೂ ಎಲ್ಲ ಕಾರ್ಮಿಕರಿಗೂ ಪಿಂಚಣಿ ಯೋಜನೆ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು.’ ಎಂದು ಒತ್ತಾಯಿಸಿದರು.

‘ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸಾಮಾಜಿಕ ಯೋಜನೆಗಳ ನೌಕರರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. ಈ ನೌಕರರು ಗೌರವಧನ, ಪ್ರೋತ್ಸಾಹಧನ ಆಧಾರದಲ್ಲಿ ಬದುಕುತ್ತಿದ್ದಾರೆ. ಇವರನ್ನು ‘ಕಾರ್ಮಿಕರು’ ಎಂದು ಪರಿಗಣಿಸಿ ಕನಿಷ್ಠ ವೇತನ ಹಾಗೂ ನಿವೃತ್ತಿ ಸೌಲಭ್ಯಗಳು ಲಭ್ಯವಾಗುವಂತೆ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕಾರ್ಮಿಕ ಸಂಘಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಯಾಗಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರುದ್ಧ ಹಾಗೂ ರಾಜ್ಯದಲ್ಲಿರುವ ರಕ್ಷಣಾ ವಲಯ, ಇತರೆ ಕೇಂದ್ರ ಸಾರ್ವಜನಿಕರ ಉದ್ದಿಮೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಕಾರ್ಮಿಕ ನ್ಯಾಯಾಲಯ ಸ್ಥಾಪಿಸಿ..
‘ಕೈಗಾರಿಕಾ ವಿವಾದಗಳನ್ನು ತ್ವರಿತವಾಗಿ ವಿಚಾರಣೆ ಹಾಗೂ ಇತ್ಯರ್ಥಗೊಳಿಸಲು ಅನುಕೂಲವಾಗುವಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಮಿಕ ನ್ಯಾಯಾಲಯವನ್ನು ಸ್ಥಾಪಿಸಬೇಕು. ನ್ಯಾಯಾಲಯಗಳ ತೀರ್ಪು ಕೂಡಲೇ ಜಾರಿಗೆ ಬರಲು ಅವಕಾಶವಾಗುವಂತೆ ಮಾಡಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರಬೇಕು’ ಎಂದು ಸಿ.ಆರ್‌.ಶಾನಭಾಗ ಒತ್ತಾಯಿಸಿದರು.

ಹೋರಾಟಕ್ಕೆ ಸಿಕ್ಕ ಜಯ: ಯಮುನಾ
ಆಶಾ ಕಾರ್ಯಕರ್ತೆಯರಿಗೆ ಸರ್ಕಾರವು ಗೌರವಧನ ₹ 5 ಸಾವಿರ ನಿಗದಿ ಮಾಡಿ ಆದೇಶ ಹೊರಡಿಸಿದ್ದು, ಸಿಐಟಿಯು ನಿರಂತರ ಹೋರಾಟಕ್ಕೆ ಜಯ ಲಭಿಸಿದೆ. ಇನ್ನು ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ಕೂಲಿ ನೀಡಬೇಕೆಂದು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ತಿಳಿಸಿದರು.

* * 

ಕಾರ್ಮಿಕ ರಂಗದ ಅಭಿವೃದ್ಧಿಗೆ ತ್ರಿಪಕ್ಷೀಯವಾದ ‘ಕರ್ನಾಟಕ ರಾಜ್ಯ ಕಾರ್ಮಿಕ ಸಮ್ಮೇಳನ’ವನ್ನು ಪ್ರತಿ ವರ್ಷ ಆಯೋಜಿಸಬೇಕು
ಸಿ.ಆರ್‌.ಶಾನಭಾಗ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.