ADVERTISEMENT

16 ನ್ಯಾಯಬೆಲೆ ಅಂಗಡಿಗಳಿಗೆ ಬೀಗ?

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 10:53 IST
Last Updated 14 ಜೂನ್ 2017, 10:53 IST

ಕಾರವಾರ: ಸರ್ಕಾರದ ಷರತ್ತನ್ನು ಪಾಲಿಸದ ಯುವಕ ಸಂಘ, ಯುವಕ ಮಂಡಳಗಳಿಂದ ನಡೆಸಲಾಗುತ್ತಿರುವ ರಾಜ್ಯದ ಸಾವಿರಾರು ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದಾಗಲಿದ್ದು, ಜಿಲ್ಲೆಯಲ್ಲಿ 16 ಅಂಗಡಿಗಳು ಬಾಗಿಲು ಮುಚ್ಚಲಿವೆ.

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಮೇ 27ರಂದು ಹೊರಡಿಸಿರುವ ಈ ಆದೇಶದ ಪ್ರಕಾರ ಯುವಕ ಸಂಘ, ಯುವಕ ಮಂಡಳ, ಮಹಿಳಾ ಮಂಡಳ ಹಾಗೂ ಗ್ರಾಮ ಮಂಡಳದ ವತಿಯಿಂದ ನಡೆಸಲಾಗುತ್ತಿರುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದಾಗಲಿದೆ. ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿ 5, ಹೊನ್ನಾವರ, ಕುಮಟಾ, ಸಿದ್ದಾಪುರದಲ್ಲಿ ತಲಾ 2, ಕಾರವಾರದಲ್ಲಿ 1 ಹಾಗೂ ಹಳಿಯಾಳದಲ್ಲಿ 4 ಅಂಗಡಿಗಳು ಒಟ್ಟು 16 ಅಂಗಡಿಗಳು ಈ ಆದೇಶದ ಅನ್ವಯ ಬಂದ್ ಆಗಲಿವೆ.

ಕಾರಣವೇನು?: ‘ಯುವಕ ಸಂಘ, ಯುವಕ ಮಂಡಳ, ಮಹಿಳಾ ಮಂಡಳ ಹಾಗೂ ಗ್ರಾಮ ಮಂಡಳದ ವತಿಯಿಂದ ನಡೆಸಲಾಗುತ್ತಿರುವ ನ್ಯಾಯಬೆಲೆ ಅಂಗಡಿಗಳು ತಮ್ಮ ವ್ಯಾಪ್ತಿಗೆ ಬರುವ ಪಡಿತರ ಕಾರ್ಡ್‌ದಾರರನ್ನು ತಮ್ಮಲ್ಲಿ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಬೇಕು. ಜತೆಗೆ ಕಾಲಕಾಲಕ್ಕೆ ಅದರ ಚುನಾವಣೆ ನಡೆಸುತ್ತಿರಬೇಕು’ ಎಂದು 2012ರಲ್ಲಿ ಆಹಾರ ಇಲಾಖೆ ಯುವಕ ಸಂಘ, ಮಂಡಳಗಳಿಗೆ ಷರತ್ತು ವಿಧಿಸಿತ್ತು. ಆದರೆ ಅದನ್ನು ಬಹುತೇಕರು ಪಾಲಿಸಿರಲಿಲ್ಲ. ಈಗ ಅದು ಅಂಗಡಿಗಳನ್ನು ಮುಚ್ಚುವ ಹಂತಕ್ಕೆ ತಂದು ನಿಲ್ಲಿಸಿದೆ.

ADVERTISEMENT

ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌) ಯಂತ್ರಗಳನ್ನು ಅಳವಡಿಸಿ, ಪಡಿತರ ವಿತರಣಾ ವ್ಯವಸ್ಥೆಯನ್ನು ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಅಂಗಡಿ ಪರವಾನಗಿ ಪಡೆಯುವವರು ಕಡ್ಡಾಯವಾಗಿ ಎಸ್.ಎಸ್. ಎಲ್‌.ಸಿ. ವಿದ್ಯಾರ್ಹತೆ ಹೊಂದಿರಲೇಬೇಕು.

ಜತೆಗೆ 65 ವರ್ಷ ಮೀರಿದವರಿಗೆ ನ್ಯಾಯಬೆಲೆ ಅಂಗಡಿಗಳಿಂದ ನಿವೃತ್ತಿ ನೀಡಲು ಉದ್ದೇಶಿಸಿ ಅವರ ಪರವಾನಗಿ ರದ್ದು ಮಾಡುವಂತೆ ಆದೇಶವನ್ನು ಹೊರಡಿಸಲಾಗಿತ್ತು. ಸರ್ಕಾರದ ಈ ಆದೇಶಕ್ಕೆ ನ್ಯಾಯಬೆಲೆ ಅಂಗಡಿಕಾರರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಯು.ಟಿ.ಖಾದರ್ ತಿಳಿಸಿದ್ದರು.

ಪಿಒಎಸ್‌ ಯಂತ್ರ ಅಳವಡಿಕೆ ಕಡ್ಡಾಯ: ಪಡಿತರ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿ ಪಿಒಎಸ್ (ಪಾಯಿಂಟ್‌ ಆಫ್ ಸೇಲ್‌) ಯಂತ್ರ ಅಳವಡಿಸಲು ಸರ್ಕಾರ ಮುಂದಾಗಿದೆ. ಅದರಂತೆ ಅಳವಡಿಸಿಕೊಂಡವರಿಗೆ ಪ್ರತಿ ಕ್ವಿಂಟಲ್‌ಗೆ ₹ 70 ಲಾಭಾಂಶ (ಕಮಿಷನ್‌), ₹ 17 ಪ್ರೋತ್ಸಾಹ ಧನ, ಒಟ್ಟು ₹ 87 ಅನ್ನು ನೀಡಲಾಗುತ್ತಿದೆ.

ಅಳವಡಿಸಿಕೊಳ್ಳದವರಿಗೆ ಪ್ರತಿ ಕಾರ್ಡ್‌ಗೆ ₹ 13 ಕಮಿಷನ್‌ ನೀಡಲಾಗುತ್ತಿದೆ. ಆದರೆ ಯಂತ್ರವನ್ನು ತಮ್ಮದೇ ಸ್ವಂತ ಖರ್ಚಿನಲ್ಲಿ ಅಳವಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿದ್ದು, ಇದು ಸಾಧ್ಯವಿಲ್ಲ ಎಂದು ಅಂಗಡಿಕಾರರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಅಳವಡಿಸಿಕೊಳ್ಳಲು ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್‌ನ ಸಮಸ್ಯೆ ಇದೆ ಎಂದು ನ್ಯಾಯಬೆಲೆ ಅಂಗಡಿಕಾರರು ಅದನ್ನು ವಿರೋಧಿಸಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 443 ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ 4ರಲ್ಲಿ ಮಾತ್ರ ಪಿಒಎಸ್ ಯಂತ್ರದ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿದ್ದು, 28 ಅಂಗಡಿಗಳು ಅಳವಡಿಕೆಗೆ ಒಪ್ಪಿಕೊಂಡಿವೆ. ಆದರೆ, ಉಳಿದ 411 ಅಂಗಡಿಗಳ ಮಾಲೀಕರು ಪಿಒಎಸ್ ಅಳವಡಿಕೆಗೆ ಹಾಗೂ ಅಳವಡಿಸಿಕೊಳ್ಳದವರಿಗೆ ₹ 13 ಕಮಿಷನ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.