ADVERTISEMENT

`1.77 ಕೋಟಿ ಅನುದಾನ ಮಂಜೂರಿ

ಗ್ರಾಮದೇವಿ ಉಡಚಮ್ಮಾ ಜಾತ್ರೆ ಹಿನ್ನೆಲೆ: ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:08 IST
Last Updated 6 ಮಾರ್ಚ್ 2017, 12:08 IST
ಹಳಿಯಾಳ: ಪಟ್ಟಣದಲ್ಲಿ 24 ವರ್ಷಗಳ ನಂತರ ಗ್ರಾಮ ದೇವಿ ಉಡಚಮ್ಮಾ ಹಾಗೂ ದ್ಯಾಮವ್ವಾ  ದೇವಿಯ ಜಾತ್ರೆಯ ಅಂಗವಾಗಿ ಪಟ್ಟಣದ ಅಭಿವೃದ್ಧಿ  ದೃಷ್ಟಿಯಿಂದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ   `1.77 ಕೋಟಿ ಅನುದಾನ ಮಂಜೂರಿಯಾಗಿದ್ದು. ಏಪ್ರಿಲ್ ನಲ್ಲಿ ಜಾತ್ರೆಯಾಗುವ ಮುಂಚೆಯೇ ಎಲ್ಲ ಕಾಮಗಾರಿಗಳು ಪೂರ್ತಿಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
 
ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದ ಅವರು, ಪಟ್ಟಣದ ಕಿಲ್ಲಾ ರಸ್ತೆಯಿಂದ ಹೊಸೂರ ಓಣಿಗೆ ಡಾಂಬರಿಕರಣ, ಹವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಹವಗಿ ತಿಮ್ಮಾಪೂರ ರಸ್ತೆ ಡಾಂಬರಿಕರಣ,  ಹಳಿಯಾಳ ಆಲೋಳ್ಳಿ ಮುಖ್ಯ ರಸ್ತೆ ಸುಧಾರಣೆ, ಹವಗಿ ಗ್ರಾಮದಿಂದ ಹಳಿಯಾಳ ಧಾರವಾಡ ಕೂಡು ರಸ್ತೆ ಸುಧಾರಣೆ, ದಾಂಡೇಲಿ ಹಳಿಯಾಳ ಮುಖ್ಯ ರಸ್ತೆಯಿಂದ ನೀರಲಗಾ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. 
 
ಪಟ್ಟಣದಲ್ಲಿ ರಥ ಸಾಗುವ ರಸ್ತೆಯ ಮರು ಡಾಂಬರಿಕರಣ, ಚಿಪ್ ಕಾರ್ಪೇಟ್ ಹಾಗೂ ಸೀಲ್ ಕೋಟ, ಅವಶ್ಯವಿದ್ದಲ್ಲಿ ಕಾಲುವೆಗಳನ್ನು ಸಿಮೆಂಟ್ ಕಾಂಕ್ರೀಟ್ ಮೂಲಕ ಕಾಂಕ್ರೀಟ್ ಬ್ಲಾಕ್ ಉಪಯೋಗಿಸಿ ಎತ್ತರಿಸುವುದು. ಕಾಲುವೆಯ ಎರಡು ಬದಿಗೆ ಪ್ರೀಕಾಸ್ಟ್ ಸ್ಲ್ಯಾಬ್ ಅಳವಡಿಸುವುದು. 
 
ಜೋಯಿಡಾ ತಾಲ್ಲೂಕಿನ ರಾಜ್ಯ ಹೆದ್ದಾರಿ ತಿನೇಘಾಟ ಪಾಲಡಾ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ` 45 ಕೋಟಿ. ಜೋಯಿಡಾ ತಾಲ್ಲೂಕಿನ ಉಳವಿ ಡಿಗ್ಗಿ ಗೋವಾ ಗಡಿ ಹತ್ತಿರ ಸೇತುವೆ ನಿರ್ಮಾಣ, ಅಣಸಿ ರಸ್ತೆ ಸುಧಾರಣೆ. ಹಳಿಯಾಳ ತಾಲ್ಲೂಕಿನ ಹವಗಿ, ಮದನಳ್ಳಿ,ಭಾಗವತಿ, ಅಂಬಿಕಾನಗರ ಅಡ್ಡಿಗೇರಾ ಕೂಡು ರಸ್ತೆ, ಮಂಗಳವಾಡ, ಪಾಳಾ, ಬಿದ್ರೋಳ್ಳಿ, ಬಾಣಸಗೇರಿ, ಬಿ.ಕೆ.ಹಳ್ಳಿ, ನಾಗಶೆಟ್ಟಿಕೊಪ್ಪ, ತತ್ವಣಗಿ, ಅಮ್ಮನಕೊಪ್ಪ ಮತ್ತಿತರರ ಗ್ರಾಮದ ರಸ್ತೆಗಳಿಗಾಗಿ `4.45 ಕೋಟಿ ಮಂಜೂರಾತಿಯಾಗಿದೆ. 
 
ಸೇತುವೆ ನಿರ್ಮಾಣ
` 68 ಲಕ್ಷ ವೆಚ್ಚದಿಂದ ತೇಲೋಲಿ ಗ್ರಾಮದಲ್ಲಿ ಸೇತುವೆ ನಿರ್ಮಾಣ,  ದಾಂಡೇಲಿಯಲ್ಲಿ ಐಟಿಎಸ್ಎಂಟಿ ಯೋಜನೆಯಡಿ ನಗರಸಭೆ ವ್ಯಾಪ್ತಿಯ  ನಿವೇಶನದಲ್ಲಿ ಮೂಲ ಸೌಕರ್ಯ ಅಭಿವೃದ್ದಿ, ಉದ್ಯಾನವನ ನಿರ್ಮಾಣ ಕ್ಕಾಗಿ `2.78ಕೋಟಿ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ತಾಲ್ಲೂಕಿನ 6 ಗ್ರಾಮ ಪಂಚಾಯಿತಿಗಳಾದ ಸಾಂಬ್ರಾಣಿ, ಯಡೋಗಾ, ಮಂಗಳವಾಡ, ಮುರ್ಕವಾಡ, ತೇರಗಾಂವ,ಅರ್ಲವಾಡ ಪಂಚಾಯತಗಳಿಗೆ ತಲಾ `15.40 ಲಕ್ಷ  ಮಂಜೂರಾಗಿದೆ.
 
ಘನತ್ಯಾಜ್ಯ ಘಟಕ ನಿರ್ಮಾಣ, ವಾಹನ ಖರೀದಿ, ದ್ರಾವಣ ಖರೀದಿ, ಬಯೋಗ್ಯಾಸ ಸ್ಥಾವರ, ಕಳೆ ಕಟಾವು ಯಂತ್ರ, ಪೈಪಕಾಂಪೋಸ್ಟನ್ನು ಪಂಚಾಯ್ತಿ ಮಟ್ಟದಲ್ಲಿ ಅಳವಡಿಸಲಾಗುವುದು. ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೊರ್ವೇಕರ ಮತ್ತಿತರರು ಉಪಸ್ಥಿತರಿದ್ದರು.
 
ಪಡಿತರ ಸಮಸ್ಯೆ ನಿವಾರಣೆ
ಹಳಿಯಾಳ ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಸಮಸ್ಯನ್ನು ನಿವಾರಣೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿದ್ದ ಪಡಿತರ ಕಾರ್ಡ್‌ದಾರರಿಗೆ 1ಲೀ ಸೀಮೆಎಣ್ಣೆ ಪೂರೈಸಲಾಗುವುದು. ಪಡಿತರ ಕಾರ್ಡದಲ್ಲಿ ಆಧಾರ ಲಿಂಕ್ ಮಾಡದೇ ಇರುವ ಸದಸ್ಯರ ಆಹಾರ ಧಾನ್ಯ ಕಡಿಮೆ ಮಾಡಲಾಗಿತ್ತು ಈಗ ಆಧಾರ ಲಿಂಕ್ ಮಾಡದೇ ಇರುವ ಕಾರ್ಡ್‌ದಾರರೂ ಸಹ ಪಡಿತರ ವಿತರಿಸಲಾಗುತ್ತಿದೆ. ಹಳಿಯಾಳ ತಾಲ್ಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳುಗೆ ಕಡಿಮೆಬಿದ್ದ ಆಹಾರಧಾನ್ಯವನ್ನು  ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ. 

ವಯಸ್ಸಾದವರ ಮತ್ತು ಅಂಗವಿಕಲ ಪಡಿತರ ಕಾರ್ಡದಾರರಿಗೆ ಕೂಪನ ನಿಂದ ವಿನಾಯತಿ ನೀಡಿ ಕಾರ್ಡ್‌ದಾರರಿಗೆ ಆಹಾರ ಧಾನ್ಯ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆಧಾರ ಲಿಂಕ್ ಮಾಡುವ ಸಂದರ್ಭದಲ್ಲಿ ವಯಸ್ಸಾದವರ ಹೆಬ್ಬಟ್ಟು ತುಲನೆಯಾಗದೇ ಇರುವಂತಹ ಕಾರ್ಡದಾರರ ಆಧಾರ ಲಿಂಕ್ ಮಾಡಲು ಆಹಾರ ನಿರೀಕ್ಷರ ಲಾಗಿನ್ ನಲ್ಲಿ ಅವಕಾಶ ನೀಡಿ ಕಾರ್ಡದಾರರಿಗೆ ಅನುಕೂಲ ಮಾಡಿಕೊಡಲಾಗಿದೆ  ಎಂದು ತಿಳಿಸಿದರು.
 
* 24 ವರ್ಷಗಳ ನಂತರ ಪಟ್ಟಣದ ಗ್ರಾಮದೇವಿ ಜಾತ್ರೆ ನಡೆಯುತ್ತಿದೆ. ಏಪ್ರಿಲ್‌ನಲ್ಲಿ ಜಾತ್ರೆಯಾಗುವ ಮುಂಚೆ ಎಲ್ಲ ಕಾಮಗಾರಿಗಳನ್ನು  ಪೂರ್ತಿಗೊಳಿಸಲಾಗುವುದು
ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.