ADVERTISEMENT

₹ 4 ಕೋಟಿ ವೆಚ್ಚದಲ್ಲಿ ಗಣೇಶಪಾಲ್ ಸೇತುವೆ

ಶಾಸಕ ಶಿವರಾಮ ಹೆಬ್ಬಾರ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 7:32 IST
Last Updated 17 ಮಾರ್ಚ್ 2018, 7:32 IST

ಯಲ್ಲಾಪುರ: ‘ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನೆರವೇರಲು ಶಾಸಕಾಂಗವೊಂದರಿಂದಲೇ ಸಾಧ್ಯವಾಗದು. ಇದಕ್ಕೆ ಕಾರ್ಯಾಂಗದ ಸಂಪೂರ್ಣ ಸಹಕಾರವಿದ್ದರೆ ಮಾತ್ರ, ಯೋಜಿತ ಕಾರ್ಯಗಳನ್ನು ಸಾಧಿಸಬಹುದು. ಜನಪ್ರತಿನಿಧಿಗಳಾದವರು ತಮ್ಮ ಕೈಗೆ ಅಧಿಕಾರ ಸಿಕ್ಕಾಗ ಜನರ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಶುಕ್ರವಾರ ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯ್ತಿಯ ಗಣೇಶಪಾಲ್‌ನ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಲವು ವರ್ಷಗಳ ಬೇಡಿಕೆಯಂತೆ ತಾಲ್ಲೂಕಿನ ಗಡಿಭಾಗದ ಗಣೇಶಪಾಲ್ ಹೊಳೆಗೆ ಸೇತುವೆ ನಿರ್ಮಿಸುವ ಕುರಿತು ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ₹ 4 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಶಿರಸಿ-ಯಲ್ಲಾಪುರ ತಾಲ್ಲೂಕುಗಳ ಸಾರ್ವಜನಿಕರ ಬಹುವರ್ಷಗಳ ಕನಸು ಸಾಕಾರಗೊಂಡಿದೆ ಎಂದರು.

‘ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬೇಡ್ತಿ, ಗಣೇಶಪಾಲ್, ಬೊಮ್ಮನಕಟ್ಟಿ, ವಂತಿಗೆ ಸೇರಿದಂತೆ ಒಟ್ಟು 11 ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಮಾಡಲಾಗಿದೆ. ಗಣೇಶಪಾಲ್ ಸೇತುವೆ ನಿರ್ಮಾಣ ದಿವಂಗತ ಟಿ.ಎಸ್.ಭಟ್ಟ ಮತ್ತು ಈ ಭಾಗದ ಅನೇಕ ಹಿರಿಯರ ಅನೇಕ ವರ್ಷಗಳ ಕನಸಾಗಿತ್ತು. ಅದೀಗ ನನಸಾಗುತ್ತಿರುವುದು ನನಗೆ ಆತ್ಮ ಸಂತೋಷ ನೀಡಿದೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್, ಹಿತ್ಲಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಿ.ಟಿ.ಹೆಗಡೆ ಜಾಲಿಮನೆ ಮಾತನಾಡಿದರು. ಯಲ್ಲಾಪುರ ಎಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ಟ, ತಾಲ್ಲೂಕುಪಂಚಾಯ್ತಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯೆ ರಾಧಾ ಹೆಗಡೆ, ಮಂಗಲಾ ನಾಯ್ಕ, ಗ್ರಾಮ ಪಂಚಾಯ್ತಿ ಸದಸ್ಯೆ ಗೌರಿ ಸಿದ್ದಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಿರೀಷ ಪ್ರಭು, ಯಲ್ಲಾಪುರ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ್, ಪ್ರಮುಖರಾದ ದ್ಯಾಮಣ್ಣ ನಾಯ್ಕ, ವಿಶ್ವೇಶ್ವರ ಹೆಗಡೆ ಉಪಸ್ಥಿತರಿದ್ದರು.
ಎಂ.ಕೆ.ಭಟ್ಟ ಯಡಳ್ಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.