ADVERTISEMENT

ಹೆದ್ದಾರಿಗೆ ಅಂಡರ್‌ಪಾಸ್ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 9:47 IST
Last Updated 17 ಜನವರಿ 2018, 9:47 IST

ಕಾರವಾರ: ಜಿಲ್ಲಾ ಕೇಂದ್ರದಿಂದ ಗೋವಾದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾಜಾಳಿ ಗ್ರಾಮದ ರಾಮನಾಥ ಕ್ರಾಸ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಾಹನ ಸಂಚಾರ ತಡೆದ ಪ್ರತಿಭಟನಾಕಾರರು, ಅಂಡರ್‌ಪಾಸ್ ನಿರ್ಮಾಣದ ಭರವಸೆ ಸಿಗುವವರೆಗೂ ಈ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಚತುಷ್ಪಥ ರಸ್ತೆಯ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಡಿಯಲ್ ರೋಡ್ ಬಿಲ್ಡರ್ಸ್ (ಐ.ಆರ್‌.ಬಿ) ಅಧಿಕಾರಿಗಳನ್ನು ಕೇಳಿದರೆ, ‘ಕಾಮಗಾರಿಯಲ್ಲಿ ಈಗ ಬದಲಾವಣೆ ಮಾಡಲು ಸಾಧ್ಯವಿಲ್ಲ. ರಸ್ತೆಯ ನಿರ್ವಹಣೆ ಅವಧಿಯಲ್ಲಿ ನಿಮ್ಮ ಮನವಿಯನ್ನು ಪರಿಗಣಿಸಲಾಗುವುದು’ ಎಂದು ಹೇಳುತ್ತಾರೆ. ಆದರೆ, ಈ ಭಾಗಕ್ಕೆ ಹೆದ್ದಾರಿ ಕಾಮಗಾರಿಯ ಭಾಗವಾಗಿಯೇ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದರೆ ಅಪಘಾತಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಈ ಬಗ್ಗೆ ಮಾಜಾಳಿ ಗ್ರಾಮ ಪಂಚಾಯಿತಿಯು ನಿರ್ಣಯ ಕೈಗೊಂಡು ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ 2016ರ ಫೆಬ್ರುವರಿಯಲ್ಲಿ ಪತ್ರ ಬರೆದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಚಿವರು, ಅಂಡರ್‌ಪಾಸ್ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದರು. ಬಳಿಕ ಇಲಾಖೆಯ ಮುಖ್ಯ ಎಂಜಿನಿಯರ್‌ ಅವರಿಗೆ ಪರಿಶೀಲಿಸುವಂತೆ ಸೂಚಿಸಿದ್ದರು ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರಾಧಿಕಾರದ ಮಂಗಳೂರು ಕಚೇರಿಯಿಂದ ಯಾವುದೇ ಸ್ಪಂದನೆ ಬಾರದಿರುವುದು ಈ ಭಾಗದ ಜನರಿಗೆ ನೋವುಂಟು ಮಾಡಿದೆ. ಮುಂದೆಯೂ ಇಲ್ಲಿ ಅಪಘಾತಗಳಾದರೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ಮಾತನಾಡಿ, ‘ಕಾರವಾರದ ಲಂಡನ್ ಬ್ರಿಜ್‌ನಿಂದ ಕೋಡಿಬಾಗ್ ಬ್ರಿಜ್‌ವರೆಗೆ ಫ್ಲೈ ಓವರ್ ಮಾಡುವಂತೆ, ಸದಾಶಿವಗಡದ ಮಹಾಮಾಯ ದೇವಸ್ಥಾನ ಹಾಗೂ ಮೀನು ಮಾರುಟ್ಟೆ ಬಳಿ ಬೈಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದೆವು. ಇಲ್ಲಿ ಕೂಡಲೇ ಅಂಡರ್‌ಪಾಸ್ ನಿರ್ಮಾಣ ಮಾಡಲಿ. ಅಲ್ಲಿಯವರೆಗೆ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಬಿಡುವುದಿಲ್ಲ’ ಎಂದರು.

ಪಿಎಸ್‌ಐ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಮುಖಂಡರಾದ ಭಾಸ್ಕರ ನಾರ್ವೇಕರ್, ಗಜಾನನ ನಾಯಕ, ಕಿಶೋರ ನಾಯಕ, ರಾಜನ್, ಬಾಬುರಾವ್ ಸಾವಂತಕರ್, ಮುಕುಂದ್, ವಿನೋದ್ ಸಾವಂತ್, ರಾಮದಾಸ್, ನಂದಕಿಶೋರ್, ಮಾನಸ ಸಾವಂತ್ ಹಾಗೂ ಗಾಂವಗೇರಿ, ಬಾವಳ, ಹಳೆಬಾಗ್, ವಾಂಗಡ್ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

50ಕ್ಕೂ ಅಧಿಕ ಸಾವು

ರಾಮನಾಥ ಕ್ರಾಸ್‌ ನಾಲ್ಕು ರಸ್ತೆಗಳು ಕೂಡುವ ಸ್ಥಳವಾಗಿದ್ದು, 1991ರಿಂದ 2015ರವರೆಗೆ 167 ಅಪಘಾತಗಳಾಗಿವೆ. ಇವುಗಳಲ್ಲಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ‌ ಪೊಲೀಸ್ ಇಲಾಖೆ ಈ ಪ್ರದೇಶವನ್ನು ಅಪಘಾತ ವಲಯ ಎಂದು ಈಗಾಗಲೇ ಘೋಷಿಸಿದೆ. ಇಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹಂಪ್ ಅಳವಡಿಸಿದರು. ಆದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

* *

ನಮ್ಮ ಮನವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ‌ಸ್ಪಂದಿಸಿದ್ದಾರೆ. ಆದರೆ, ಐಆರ್‌ಬಿ ಅಧಿಕಾರಿಗಳಿಂದ ಸ್ಪಷ್ಟ ಭರವಸೆ ಸಿಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ನಾಗರಾಜ ಜೋಶಿ
ಬಿಜೆಪಿ ಜಿಲ್ಲಾ ಘಟಕದ ಮಾಜಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.