ADVERTISEMENT

ಹಣದಿಂದ ರಾಜಕಾರಣ ಅಳತೆ ಮಾಡುತ್ತಿರುವುದು ದುರ್ದೈವ: ನಾಗರಾಜ ನಾಯಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 9:51 IST
Last Updated 24 ಜನವರಿ 2018, 9:51 IST

ಕಾರವಾರ: ‘ಪ್ರತಿಯೊಬ್ಬನಿಗೂ ಪ್ರಾಮಾಣಿಕವಾಗಿ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವು ಸಂದರ್ಭಗಳು ಆತನನ್ನು ಭ್ರಷ್ಟಾಚಾರಕ್ಕೆ ನೂಕುತ್ತದೆ. ಇಂದಿನ ರಾಜಕೀಯವೇ ಇದಕ್ಕೆ ಮೂಲ ಕಾರಣ. ರಾಜಕಾರಣವನ್ನು ಹಣದ ಮೂಲಕ ಅಳತೆ ಮಾಡುತ್ತಿರುವುದು ದುರ್ದೈವದ ಸಂಗತಿ’ ಎಂದು ಬಿಜೆಪಿ ಮುಖಂಡ ನಾಗರಾಜ ನಾಯಕ ಹೇಳಿದರು.

ತಾಲ್ಲೂಕಿನ ಅಮದಳ್ಳಿಯಲ್ಲಿ ದಿ.ಉಲ್ಲಾಸ ತಳೇಕರ ಸ್ಮರಣಾರ್ಥ ಶ್ರೀಬ್ರಹ್ಮದೇವ ಯುವಕ ಮಂಡಳ ಹಾಗೂ ಭೂದೇವಿ ಯುವತಿ ಮಂಡಳದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

‘ಪ್ರಾಮಾಣಿಕತೆಯನ್ನು ಜನರು ಬೆಂಬಲಿಸಬೇಕು. ಯುವ ಜನತೆ ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಬೆಳೆಸಿಕೊಂಡಲ್ಲಿ ಸಮಾಜವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಬಹುಮಾನಿತರು: ಟೂರ್ನಿಯಲ್ಲಿ ಒಟ್ಟೂ 18 ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿನಲ್ಲಿ ಕುಮಟಾ ಮತ್ತು ಅಂಕೋಲಾ ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಕುಮಟಾ ತಂಡ ಗೆಲುವು ಸಾಧಿಸಿ ಆಕರ್ಷಕ ಟ್ರೋಫಿಯೊಂದಿಗೆ ₨ 22,222 ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ಅಂಕೋಲಾ ತಂಡ ಟ್ರೋಫಿಯೊಂದಿಗೆ ₨ 11,111 ನಗದು ಬಹುಮಾನ ತನ್ನದಾಗಿಸಿಕೊಂಡಿತು.

ಟೂರ್ನಿಯ ನಿರ್ಣಾಯಕರಾಗಿ ಎಂ.ಗಂಗಾ ನಾಯ್ಕ ಸಿದ್ದಾಪುರ, ಉಮೇಶ ಎಸ್.ಕೆ ಶಿರಸಿ ಕಾರ್ಯನಿರ್ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಶ್ರೀಧರ ತಳೇಕರ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಮಹಾಲೆ ಕಾರ್ಯಕ್ರಮ ನಿರೂಪಿಸಿದರು. ನರೇಂದ್ರ ತಳೇಕರ ವಂದಿಸಿದರು.

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಅಮದಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತ್ಯನಾರಾಯಣ ಪಡ್ತಿ, ಉಪಾಧ್ಯಕ್ಷೆ ಐ.ವಿ ಫರ್ನಾಂಡಿಸ್, ಸದಸ್ಯರಾದ ದೇವಾನಂದ ಚಂಡೇಕರ, ಬೇಬಿ ಆಗೇರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.