ADVERTISEMENT

ದಾಕ್ಷಾಯಣಿ ಯುವತಿ ಮಂಡಳಕ್ಕೆ ಯುವ ಸಾಂಘಿಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 8:57 IST
Last Updated 12 ಫೆಬ್ರುವರಿ 2018, 8:57 IST

ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ 2015-16ನೇ ಸಾಲಿನ ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಯನ್ನು ಶನಿವಾರ ಇಲ್ಲಿ ನಡೆದ ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿರಸಿಯ ದಾಕ್ಷಾಯಣಿ ಯುವತಿ ಮಂಡಳಕ್ಕೆ ನೀಡಿ ಗೌರವಿಸಲಾಯಿತು.

ತಾಲ್ಲೂಕಿನ ಬಿಣಗಾದ ಸಿದ್ಧರಾಮೇಶ್ವರ ಯುವಕ ಸಂಘದ ನಾಗರಾಜ ಗೌಡ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ದಿಲೀಪ್ ಕೊಠಾರಕರ್, ಆಜಾದ್ ಯೂಥ್ ಕ್ಲಬ್‌ನ ಮೊಹ್ಮದ್ ಉಸ್ಮಾನ್ ಶೇಖ್, ಭಟ್ಕಳದ ಫ್ರೆಂಡ್ಸ್ ಯೂಥ್‌ ಕ್ಲಬ್‌ನ ರಾಜೇಶ ನಾಯ್ಕ ಹಾಗೂ ಜೊಯಿಡಾದ ಸಹ್ಯಾದ್ರಿ ಯುವಕ ಸಂಘದ ಸಚಿನ್ ತಳೇಕರ್‌ಗೆ ವೈಯಕ್ತಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವೈಯಕ್ತಿಕ ಪ್ರಶಸ್ತಿ ತಲಾ ₹ 5 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸಾಂಘಿಕ ವಿಭಾಗದ ಪ್ರಶಸ್ತಿ ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ADVERTISEMENT

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕ ಸತೀಶ್ ಸೈಲ್, ‘ರಾಷ್ಟ್ರದ ಏಳಿಗೆಗೆ ಯುವಕರೇ ಬುನಾದಿ. ತಪ್ಪು ದಾರಿ ತುಳಿಯದೆ ಸಮಾಜ ಗೌರವಿಸುವ ರೀತಿಯಲ್ಲಿ ಬದುಕಬೇಕು. ದೇಶದ ಅಭಿವೃದ್ಧಿಗೆ ಯುವಜನತೆ ಕೈಜೋಡಿಸಬೇಕು’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಸದಸ್ಯರಾದ ಮಾರುತಿ ನಾಯ್ಕ ಹಾಗೂ ನಂದಿನಿ ಗುನಗಿ ಇದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.