ADVERTISEMENT

ಅಮಿತ್ ಶಾ ಭೇಟಿ: ತಾತ್ಕಾಲಿಕ ಅಂಗಡಿಗಳ ತೆರವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 8:55 IST
Last Updated 21 ಫೆಬ್ರುವರಿ 2018, 8:55 IST

ಗೋಕರ್ಣ: ಇಲ್ಲಿ ಜಾತ್ರೆಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಅಂಗಡಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫೆ.21ರಂದು ಗೋಕರ್ಣಕ್ಕೆ ಬರುತ್ತಿರುವ ಕಾರಣ ತೆರವುಗೊಳಿಸಲು ಜಿಲ್ಲಾಡಳಿತ ಆದೇಶಿಸಿದೆ.

ಮೇಲಿನಕೇರಿಯಿಂದ ರಥಬೀದಿ ಮಾರ್ಗವಾಗಿ ಮುಖ್ಯ ದೇವಸ್ಥಾನದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಅಂಗಡಿಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಈ ಆದೇಶದಿಂದ ಜಾತ್ರಾ ಪೇಟೆ ಅಸ್ತವ್ಯಸ್ತವಾಗಲಿದ್ದು, ಅಂಗಡಿಕಾರರ ಅಸಮಾಧಾನಕ್ಕೆ ಕಾರಣವಾಗಿದೆ.

‘ಕೇವಲ ಎರಡು ಗಂಟೆಗಳ ಅವಧಿಗೆ ಬಿಜೆಪಿ ನಾಯಕರು ಮುಖ್ಯರಸ್ತೆಯಲ್ಲಿ ಗೋಕರ್ಣಕ್ಕೆ ಬರುವವರಿದ್ದಾರೆ. ಹೆಚ್ಚಿನ ಹಣ ಸಂದಾಯ ಮಾಡಿ ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆದು ಆರಂಭಿಸಿದ ಅಂಗಡಿಗಳನ್ನು ತೆರವುಗೊಳಿಸುವುದು ಸಮಂಜಸವೇ ಎಂದು ಪ್ರಶ್ನಿಸಿದ್ದಾರೆ. ಸ್ಥಳೀಯರು ವ್ಯಾಪಾರ ಮಾಡುವುದೇ ಜಾತ್ರೆ ಮುಗಿದ ನಾಲ್ಕೈದು ದಿನಗಳಲ್ಲಿ. ಈಗ ತೆರವುಗೊಳಿಸಿದರೆ ತುಂಬ ನಷ್ಟವಾಗಲಿದೆ’ ಎಂದು ಬಟ್ಟೆ ಅಂಗಡಿ ಮಾಲೀಕ ರಾಜೇಶ ಪಾಲನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅಧಿಕಾರಿಗಳು, ‘ಅಮಿತ್ ಶಾ ಅವರು ಉನ್ನತ ಭದ್ರತೆ ಇರುವ ವ್ಯಕ್ತಿಯಾಗಿದ್ದು, ಭದ್ರತಾ ನಿಯಮ ಪಾಲಿಸುವುದು ಅನಿವಾರ್ಯವಾಗಿದೆ. ಅವರು ಹೋದ ನಂತರ ಮತ್ತೆ ಬೇಕಾದರೆ ಅಂಗಡಿ ಹಾಕಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.