ADVERTISEMENT

ಮಳೆ ನೀರಿನೊಂದಿಗೆ ತ್ಯಾಜ್ಯ ಸೇರ್ಪಡೆ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 13:28 IST
Last Updated 6 ಜುಲೈ 2018, 13:28 IST
ಶಿರವಾಡದ ಕೈಗಾರಿಕಾ ಪ್ರದೇಶದಲ್ಲಿ ಮಳೆ ನೀರು ಹಳ್ಳಕ್ಕೆ ಹರಿಯುತ್ತಿರುವುದು
ಶಿರವಾಡದ ಕೈಗಾರಿಕಾ ಪ್ರದೇಶದಲ್ಲಿ ಮಳೆ ನೀರು ಹಳ್ಳಕ್ಕೆ ಹರಿಯುತ್ತಿರುವುದು   

ಕಾರವಾರ: ನಗರ ಸಮೀಪದ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ಗಲೀಜು ನೀರು ಕುಡಿಯುವ ನೀರಿಗೆ ಸೇರುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದುಸಣ್ಣ ಕೈಗಾರಿಕಾ ಮಾಲೀಕರ ಸಂಘದ ಉಪಾಧ್ಯಕ್ಷ ಪ್ರಸಾದ ಕಾಮತ್ ದೂರಿದ್ದಾರೆ.

ಜೋರು ಮಳೆಯಾದಾಗ ಹರಿಯುವ ನೀರಿನಲ್ಲಿ ದ್ರವತ್ಯಾಜ್ಯವೂ ಸೇರಿರುತ್ತದೆ. ಇದು ಗಟಾರದಲ್ಲಿ ಹರಿದು ಬಂದು ಕೈಗಾರಿಕಾ ಪ್ರದೇಶದಲ್ಲಿರುವ ಕುಡಿಯುವ ನೀರಿನ ಬಾವಿಗಳಿಗೆ ಇಳಿಯುತ್ತಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ಮೂರು– ನಾಲ್ಕು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ಮೇಲೆ ಪರಿಣಾಮವಾದರೆ ನಗರಸಭೆಯವರೇ ಜವಾಬ್ದಾರರು ಎಂದು ಅವರು ಎಚ್ಚರಿಸಿದ್ದಾರೆ.

ತ್ಯಾಜ್ಯ ಮಿಶ್ರಿತ ನೀರು ಹರಿಯುವ ಪ್ರದೇಶದ ಸುತ್ತಮುತ್ತ ಅಸಹನೀಯ ದುರ್ವಾಸನೆ ಬೀರುತ್ತಿದೆ. ಸ್ಥಳೀಯ ಗ್ರಾಮ ಪಂಚಾಯ್ತಿಯವರು ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಬೇಕುಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆ ಆಯುಕ್ತಎಸ್.ಎಸ್.ಯೋಗೀಶ್ವರ್, ‘ಮಳೆ ಬಂದಾಗ ಬೆಟ್ಟದ ನೀರು ಹರಿದು ಹೋಗಲು ಸಣ್ಣ ಕಾಲುವೆ ನಿರ್ಮಾಣ ಮಾಡಲಾಗಿದೆ. ಅದು ತ್ಯಾಜ್ಯ ವಿಲೇವಾರಿ ಘಟಕದ ಮೂಲಕ ಬರುತ್ತದೆ. ಆದರೆ,ಘಟಕದ ದ್ರವ ತ್ಯಾಜ್ಯ ಹರಿದುಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅದು ಪ್ರತ್ಯೇಕ ಹೊಂಡವೊಂದಕ್ಕೆ ಹರಿಯುತ್ತದೆ. ಅದು ಮಳೆ ನೀರಿನೊಂದಿಗೆ ಮಿಶ್ರಣವಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಟ್ಟದಿಂದ ಬರುವ ಮಳೆ ನೀರು ಹರಿದು ಹೋಗಿ ಸಮೀಪದ ಕೆರೆಗೆ ಸೇರುತ್ತದೆ. ಅದು ಕೈಗಾರಿಕಾ ಪ್ರದೇಶಕ್ಕೆ ಹೋಗದಂತೆ ಮುನ್ನೆಚ್ಚರಿಕೆಯಾಗಿ ಜೆಸಿಬಿ ಮೂಲಕ ಗುಂಡಿ ತೋಡಲಾಗಿದೆ. ಸ್ಥಳೀಯರು ಆತಂಕ ಪಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.