ADVERTISEMENT

ಉಪ ಮೇಯರ್‌ಗೆ ತುರುಸಿನ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 6:47 IST
Last Updated 28 ಜುಲೈ 2017, 6:47 IST

ವಿಜಯಪುರ: ಸತತ ನಾಲ್ಕನೇ ಬಾರಿಗೆ ಮಹಾನಗರ ಪಾಲಿಕೆಯ ಚುಕ್ಕಾಣಿ ಯನ್ನು ಕಾಂಗ್ರೆಸ್‌ ‘ಕೈ’ ವಶಪಡಿಸಿಕೊಳ್ಳುವುದು ಖಾತ್ರಿಯಾಗಿದ್ದು, ಎರಡನೇ ಬಾರಿಗೆ ಸಂಗೀತಾ ಪೋಳ ಮೇಯರ್‌ ಆಗಿ ಶುಕ್ರವಾರ ಆಯ್ಕೆಯಾಗಲಿದ್ದಾರೆ. ಒಮ್ಮೆ ಬಿಜೆಪಿ ಬಂಡಾಯ, ಇನ್ನೊಮ್ಮೆ ಜೆಡಿಎಸ್‌ನ ಯತ್ನಾಳ ಬೆಂಬಲಿತ ಸದಸ್ಯೆ, ಮತ್ತೊಮ್ಮೆ ಬಿಜೆಪಿ ಸದಸ್ಯನಿಗೆ ಒಲಿದಿದ್ದ ಉಪ ಮೇಯರ್‌ ಪಟ್ಟ ಈ ಬಾರಿ ಕಗ್ಗಂಟಾಗಿದ್ದು, ಇದು ವರೆಗೂ ‘ಪಾಲಿಕೆ ಪಾಲಿಟಿಕ್ಸ್‌’ ನಿಯಂತ್ರಿ ಸುತ್ತಿದ್ದ ಪ್ರಭಾವಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪ್ರಸ್ತುತ ಅವಧಿ ಚುನಾವಣಾ ವರ್ಷ ವಾಗಿರುವುದರಿಂದ ಬಿಜೆಪಿ ಸಹ ಶತಾಯ ಗತಾಯ ಉಪ ಮೇಯರ್‌ ಹುದ್ದೆಗಾಗಿ ಕಸರತ್ತು ನಡೆಸಿದೆ. ಗುರುವಾರ ರಾತ್ರಿ ಸಭೆ ನಡೆಸಿದ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮುಖಂಡ ಚಂದ್ರಶೇಖರ ಕವಟಗಿ ನೇತೃತ್ವದ ಸಮಿತಿ ಒಮ್ಮತದ ಅಭ್ಯರ್ಥಿ ಘೋಷಿಸುವಲ್ಲಿ ವಿಫಲವಾಯಿತು.

ಮಡಿವಾಳಪ್ಪ ಸಜ್ಜನ, ಪರಶುರಾಮ ರಜಪೂತ ನಡುವೆ ತೀವ್ರ ಪೈಪೋಟಿ ಏರ್ಪಟಿದ್ದರಿಂದ ಪಕ್ಷದ ಅಭ್ಯರ್ಥಿ ಆಯ್ಕೆಯನ್ನು ಶುಕ್ರವಾರ ಪ್ರಕಟಿಸಲಾಗುವುದು ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

ADVERTISEMENT

ಜೆಡಿಎಸ್‌ ಪಾಲಿಕೆಯಲ್ಲಿ ಎಂಟು ಸದಸ್ಯರನ್ನು ಹೊಂದಿದ್ದರೂ, ಜಿಲ್ಲಾ–ನಗರ ಘಟಕದಿಂದ ಯಾವುದೇ ಕಸರತ್ತು ನಡೆಯಲಿಲ್ಲ. ಕೆಲ ಆಸಕ್ತ ಸದಸ್ಯರೇ ಉಪ ಮೇಯರ್‌ ಹುದ್ದೆಗಾಗಿ ತಂತ್ರಗಾರಿಕೆ ರೂಪಿಸಿದ್ದು, ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ನಿರ್ಧಾರವೇ ಇಲ್ಲಿ ಅಂತಿಮ ಎನ್ನಲಾಗಿದೆ.

ಎಂ.ಬಿ.ಪಾಟೀಲ ಅಂಗಳದಲ್ಲಿ: ಉಪ ಮೇಯರ್‌ ಆಯ್ಕೆ ಪ್ರಕ್ರಿಯೆಯ ಚೆಂಡು ಸಚಿವ ಎಂ.ಬಿ.ಪಾಟೀಲ ಅಂಗಳಕ್ಕೆ ಗುರು ವಾರ ರಾತ್ರಿ ರವಾನೆಯಾಗಿದ್ದು, ಪಾಟೀಲ ತೆಗೆದುಕೊಳ್ಳುವ ನಿರ್ಧಾರಕ್ಕೆ ಪಾಲಿಕೆಯ ಎಲ್ಲ ಸದಸ್ಯರು ಸಮ್ಮತಿ ನೀಡಲಿದ್ದಾರೆ ಎಂಬುದು ವಿಶ್ವಾಸಾರ್ಹನೀಯ ಮೂಲಗಳಿಂದ ತಿಳಿದು ಬಂದಿದೆ.

ಪಾಲಿಕೆಯ ಬಿಜೆಪಿ 13 ಸದಸ್ಯರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಸಭೆಯ ಬಳಿಕ ನೇರವಾಗಿ ಖಾಸಗಿ ಗೆಸ್ಟ್‌ ಹೌಸ್‌ನಲ್ಲಿ ಸಚಿವ ಎಂ.ಬಿ.ಪಾಟೀಲ ಕರೆದಿದ್ದ ಸಭೆಗೆ ಹಾಜರಾಗಿ ಉಪ ಮೇಯರ್‌ ಆಯ್ಕೆಗೆ ಸಂಬಂಧಿಸಿದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಕೆಜೆಪಿ, ಎನ್‌ಸಿಪಿ, ಪಕ್ಷೇತರ ಸದಸ್ಯರು ಉಪಸ್ಥಿತರಿದ್ದು, ಸಚಿವ ಎಂ.ಬಿ. ಪಾಟೀಲ ಘೋಷಿಸುವ ಅಭ್ಯರ್ಥಿಯೇ ಉಪ ಮೇಯರ್‌ ಆಗಿ ಆಯ್ಕೆಗೊಳ್ಳ ಲಿದ್ದಾರೆ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

ಉಪ ಮೇಯರ್‌ ಆಯ್ಕೆಗೆ ಸಂಬಂಧಿ ಸಿದಂತೆ ಸಚಿವರ ಆಪ್ತ ವಲಯದಲ್ಲೇ ತೀವ್ರ ಪೈಪೋಟಿ ನಡೆದಿದ್ದು, ಸಚಿವರು ಯಾವ ಲಾಬಿಗೆ ಮನ್ನಣೆ ನೀಡುತ್ತಾರೆ ಎಂಬುದು ಗೌಪ್ಯವಾಗಿದ್ದು, ಗುರುವಾರ ತಡರಾತ್ರಿ, ಇಲ್ಲವೇ ಶುಕ್ರವಾರ ಮುಂಜಾನೆ ಯಾರು ಉಪ ಮೇಯರ್ ಅಭ್ಯರ್ಥಿ ಆಗಲಿದ್ದಾರೆ ಎಂಬುದು ಬಹಿರಂಗಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.