ADVERTISEMENT

ಕಂದಕದ ಹೂಳು ತೆರವಿಗೆ ಚಾಲನೆ

ಹಂಚನಾಳ ಕೆರೆ ಸೇರಲಿರುವ ಮಳೆ ನೀರು

ಡಿ.ಬಿ, ನಾಗರಾಜ
Published 31 ಮಾರ್ಚ್ 2015, 6:05 IST
Last Updated 31 ಮಾರ್ಚ್ 2015, 6:05 IST

ವಿಜಯಪುರ: ನಗರದ ಕೋಟೆ ಗೋಡೆ ಹೊರಭಾಗದ ಸುತ್ತಲೂ ಇರುವ 4.8 ಕಿ.ಮೀ. ದೂರದ ಕಂದಕದ ಹೂಳೆತ್ತಲು ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಆರಂಭಿಸಿದೆ.

ಇಲಾಖೆಗೆ ಲಭ್ಯವಿರುವ ಅನುದಾನ ಬಳಸಿಕೊಂಡು ನಗರ ಶಾಸಕರ ಸೂಚನೆಯಂತೆ ಕಂದಕದ ಹೂಳೆತ್ತುವ ಕಾಮಗಾರಿ ನಡೆದಿದ್ದು, ಆಮೆ ವೇಗದಲ್ಲಿ ಸಾಗಿದೆ.

ಜನವರಿಯಲ್ಲಿ ಕಾಮಗಾರಿ ಆರಂಭಗೊಂಡಿದೆ. ಇನ್ನೆರೆಡು ತಿಂಗಳು ಕಳೆದರೆ ಮಳೆಗಾಲ ಆರಂಭವಾಗುವುದು. ಅಷ್ಟರೊಳಗೆ ಕಂದಕದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ಪೂರ್ಣಗೊಳಿಸಿದರೆ ಯಾವುದೇ ಸಮಸ್ಯೆ ಕಾಡಲ್ಲ. ಇದರ ಜತೆಗೆ ಕಂದಕಕ್ಕೆ ಚರಂಡಿ ನೀರು ಸೇರದಂತೆ ನಗರ ಪಾಲಿಕೆ ಆಡಳಿತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹಿಂದಿನಂತೆ ಈ ವರ್ಷವೂ ಜನತೆ ಸಮಸ್ಯೆ ಎದುರಿಸುವುದು ತಪ್ಪಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆರ್‌ಟಿಓ ಕ್ರಾಸ್‌ನಿಂದ ಹಿಡಿದು ಇಂಡಿ ಕ್ರಾಸ್‌ವರೆಗೂ ಕಂದಕದ ಹೂಳು ತೆಗೆಯುವುದು. ತಗ್ಗು–ದಿಣ್ಣೆ ಸರಿಪಡಿಸಿ ಮಳೆ ನೀರು ಸರಾಗವಾಗಿ ಹರಿದು ಇಂಡಿ ಕ್ರಾಸ್‌ನಲ್ಲಿ ನೈಸರ್ಗಿಕ ಹಳ್ಳದ ಮೂಲಕ ಹಂಚನಾಳ ಕೆರೆ ಸೇರುವಂತೆ ಕಾಮಗಾರಿ ನಡೆಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಚೌಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

ನವಭಾಗ್ ರಸ್ತೆಯಲ್ಲಿ ಒಂದು, ಬಿಎಲ್‌ಡಿಇ, ಇಂಡಿ ಕ್ರಾಸ್‌ ನಡುವೆ ಎರಡು ಕಾಂಕ್ರೀಟ್‌ ಸೇತುವೆಗಳನ್ನು ನಿರ್ಮಿಸಬೇಕು. ಮೇ ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಯುಜಿಡಿ ಸಮಸ್ಯೆಯಿಂದ ಚರಂಡಿ ನೀರು ಕಂದಕ ಸೇರುತ್ತಿದೆ. 2 ತಿಂಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ನಗರಪಾಲಿಕೆಯ ಎಂಜಿನಿಯರ್ ಕಗ್ಗೋಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.