ADVERTISEMENT

ಜನಸಾಗರ ನಿಯಂತ್ರಣಕ್ಕೆ ಹರಸಾಹಸ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 4:56 IST
Last Updated 24 ಏಪ್ರಿಲ್ 2017, 4:56 IST

ಝುಂಜರವಾಡ (ಅಥಣಿ ತಾಲ್ಲೂಕು): ಕಾವೇರಿ ಕೊಳವೆಬಾವಿಯೊಳಗೆ ಕಾಲು ಜಾರಿ ಬಿದ್ದ ವಿಷಯ ಕಾಳ್ಗಿಚ್ಚಿನಂತೆ ಮಾಧ್ಯಮ ಮೂಲಕ ಬಿತ್ತರಗೊಳ್ಳುತ್ತಿ ದ್ದಂತೆ, ಪುನರ್ವಸತಿ ಕೇಂದ್ರದಿಂದ ಕೂಗ ಳತೆ ದೂರದಲ್ಲಿದ್ದ ಘಟನಾ ಸ್ಥಳಕ್ಕೆ ಜನ ತಂಡೋಪತಂಡವಾಗಿ ಭೇಟಿ ನೀಡಿತು.ಶನಿವಾರ ರಾತ್ರಿಯಿಂದಲೇ ಆರಂಭ ಗೊಂಡ ಜನ ಪ್ರವಾಹ ಭಾನುವಾರ ತಡ ರಾತ್ರಿಯಾದರೂ ಮುಂದುವರೆ ದಿತ್ತು. ಕಾರ್ಯಾಚರಣೆಯ ಕ್ಷಣ ಕ್ಷಣದ ಚಿತ್ರಣ ವೀಕ್ಷಿಸಲು, ನೆತ್ತಿ ಸುಡುವ ಕೆಂಡ ದಂಥ ಬಿಸಿಲನ್ನೂ ಲೆಕ್ಕಿಸದೆ ಜಮಾಯಿಸಿತ್ತು.

ಕಣ್ಣು ಹಾಯಿಸಿದಷ್ಟು ದೂರ ವಾಹನಗಳ ಸಾಲು ಹೊಲದ ನಾಲ್ಕು ದಿಕ್ಕುಗಳಲ್ಲೂ ಗೋಚರಿಸಿತು. ರಸ್ತೆಗಳಲ್ಲಿ ವಾಹನ ಸಂಚಾರ ನಿರಂತರವಾಗಿ ಕಂಡು ಬಂದಿತು. ಕಾರ್ಯಾಚರಣೆಯನ್ನು ಹತ್ತಿರ ದಿಂದ ನೋಡಬೇಕು ಎಂಬ ಕುತೂಹಲ ದಿಂದ ಕೊಳವೆಬಾವಿ ಸುತ್ತಲೂ ಜನ ದಟ್ಟಣೆ ಜಮಾಯಿಸುತ್ತಿದ್ದಿದ್ದು, ನಿಯಂತ್ರಿ ಸುವಲ್ಲಿ ಪೊಲೀಸರು ಹೈರಾಣಾದರು. ಕೆಲವೊಮ್ಮೆ ಹಿಟಾಚಿ ಯಂತ್ರಗಳನ್ನು ಅತ್ತಿಂದಿತ್ತ ಸುತ್ತುವರಿಸುವ ಮೂಲಕ ಜನರನ್ನು ಚೆದುರಿಸಬೇಕಾಯಿತು.

ಝುಂಜರವಾಡ ಸುತ್ತಮುತ್ತಲ ಗ್ರಾಮಗಳ ಜನತೆ ಸೇರಿದಂತೆ ಅಥಣಿ, ಇನ್ನಿತರೆ ತಾಲ್ಲೂಕುಗಳ ಜನತೆಯೂ ಖಾಸಗಿ ವಾಹನಗಳಲ್ಲಿ ತಂಡೋಪ ತಂಡ ವಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿತು. ಇದರ ಜತೆಗೆ ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕು, ವಿಜಯಪುರ ಜಿಲ್ಲೆಯ ಗಡಿ ಭಾಗದ ಹೊನವಾಡ ಸುತ್ತಮುತ್ತಲ ಭಾಗದ ವಿವಿಧ ಗ್ರಾಮಗಳ ಗ್ರಾಮಸ್ಥರು ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು.

ADVERTISEMENT

‘ಕಾವೇರಿ’ ಪ್ರಾರ್ಥನೆ: ಶನಿವಾರ ಮುಸ್ಸಂಜೆ ಘಟನೆ ನಡೆದ ಕೆಲ ಹೊತ್ತಿನಲ್ಲೇ ಜಿಲ್ಲೆಯೂ ಸೇರಿದಂತೆ ನೆರೆ ಹೊರೆ ಜಿಲ್ಲೆಯ ವಿವಿಧೆಡೆ ಕಾವೇರಿಯ ಉಳಿವಿಗಾಗಿ ಪ್ರಾರ್ಥನೆ, ವಿಶೇಷ ಪೂಜೆ ನಡೆದವು.ಕಾರ್ಯಾಚರಣೆ ವೀಕ್ಷಿಸಲು ಬಂದಿದ್ದ ಜನಸ್ತೋಮ ಸಹ ‘ಜೀವನ್ಮರಣದ ಹೋರಾಟದಲ್ಲಿ ಗೆದ್ದು ಬಾ ಕಾವೇರಿ’ ಎಂದು ಪ್ರಾರ್ಥಿಸುತ್ತಿದ್ದ ದೃಶ್ಯಾವಳಿ ಗೋಚರಿಸಿದವು.

ಮಾನವೀಯತೆ ಮೆರೆದರು: ಘಟನೆ ನಡೆ ಯುತ್ತಿದ್ದಂತೆ ಹೊಲದಲ್ಲೇ ವಸ್ತಿಯಿದ್ದ ಮಾಲೀಕ ಶಂಕರಪ್ಪ ಅಪ್ಪಣ್ಣ ಹಿಪ್ಪರಗಿ ನಾಪತ್ತೆಯಾಗಿದ್ದರು. ಇವರ ಕುಟುಂಬ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕು ಮುರ್ತೂರು ಗ್ರಾಮದಲ್ಲಿ ವಾಸವಿದ್ದು, ಯಾರೊಬ್ಬರೂ ಇತ್ತ ಬಾರ ದಿದ್ದರಿಂದ, ಹೊಲದ ವಸತಿಯಲ್ಲಿ ಕಟ್ಟಲಾಗಿದ್ದ ಎರಡು ಆಕಳು–ಎರಡು ಕರುಗಳು ಅನಾಥವಾಗಿದ್ದವು.

ಕಾರ್ಯಾಚರಣೆ ವೀಕ್ಷಿಸಲು ಬಂದಿದ್ದ ಇಲ್ಲಿಗೆ ಸಮೀಪದ ಕೊಕಟನೂರ ಗ್ರಾಮದ ರೈತ ಶ್ರೀಶೈಲ ಬಡಿಗೇರ ಬೋರ್‌ವೆಲ್‌ ಚಾಲೂ ಮಾಡಿ ಆಕಳು ಗಳಿಗೆ ನೀರು ಕುಡಿಸುವ ಜತೆಗೆ, ಸನಿಹದಲ್ಲೇ ಇದ್ದ ಜೋಳದ ಕಣಕಿ ಹಾಕಿ ಮಾನವೀಯತೆ ಮೆರೆದರು.ಈ ಘಟನೆ ಬಳಿಕ ಹಾದಿಯಲ್ಲಿ ಸಂಚ ರಿಸಿದ ಬಹುತೇಕರು ಜಾನುವಾರುಗಳಿಗೆ ಮೇವು–ನೀರು ಒದಗಿಸುವ ಮೂಲಕ ಕಾಳಜಿ ಪ್ರದರ್ಶಿಸಿದರು.

ನೀರಿಗೆ ಬೇಡಿಕೆ: ಹೊಲದ ಸುತ್ತಲೂ ಮರ–ಗಿಡಗಳಿಲ್ಲದಿದ್ದರಿಂದ ಎಲ್ಲೂ ನೆರಳಿನ ವ್ಯವಸ್ಥೆಯಿರಲಿಲ್ಲ. ಒಂದೆಡೆ ಭಾನುವಾರ ಮಧ್ಯಾಹ್ನದ ಬಳಿಕ ಶಾಮಿಯಾನದ ವ್ಯವಸ್ಥೆ ಮಾಡಿದ್ದರೂ ಜನಸ್ತೋಮಕ್ಕೆ ಸಾಕಾಗಲಿಲ್ಲ.ಅಪಾರ ಪ್ರಮಾಣದ ಜನ ನೆತ್ತಿ ಸುಡುವ ಕೆಂಡದಂಥ ಬಿಸಿಲಿನಲ್ಲೇ ಕಾರ್ಯಾಚರಣೆ ವೀಕ್ಷಿಸಿದರು. ಈ ಸಂದರ್ಭ ಬಾಯಾರಿ ಕುಡಿಯುವ ನೀರಿಗಾಗಿ ಪರಿತಪಿಸಿದರು. ಒಂದು ಟ್ಯಾಂಕರ್‌ ನೀರಿದ್ದರೂ ಸಾಲಲಿಲ್ಲ. ಜನರ ದಾಹ ಇಂಗಿಸಲು ಸುತ್ತಮುತ್ತಲ ಗ್ರಾಮಗಳ ಕೆಲವರು ನೀರಿನ ಬಾಟಲ್‌ ತಂದು ವ್ಯಾಪಾರ ಮಾಡಿದರು.

ಮುಂಜಾನೆಯಿಂದ ರಾತ್ರಿಯವರೆಗೂ ಹಲ ಬಾರಿ ನೀರು ತಂದು ಮಾರಾಟ ಮಾಡಿದೆವು. ಅಂಗಡಿಗಳಲ್ಲಿ ಒಂದು ಲೀಟರ್‌ ಬಾಟಲಿ ನೀರಿಗೆ ₹ 20 ಪಡೆಯುವಂತೆ, ಘಟನಾ ಸ್ಥಳದಲ್ಲೂ ತಣ್ಣನೆಯ ನೀರನ್ನು ಅದೇ ಬೆಲೆಗೆ ಮಾರಾಟ ಮಾಡಿದೆವು ಎಂದು ಕೊಕಟನೂರಿನ ಸುದೀಪ್ ಅಥಣಿ ‘ಪ್ರಜಾವಾಣಿ’ಗೆ ತಿಳಿಸಿದರು. ಐಸ್‌ ಕ್ರೀಂ, ಐಸ್‌ ಕ್ಯಾಂಡಿ ಮಾರಾಟವೂ ಭರ್ಜರಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.