ADVERTISEMENT

ಜಿಲ್ಲಾಧಿಕಾರಿಗೆ ರೈತರ ಮುತ್ತಿಗೆ

ತೊಗರಿ ಖರೀದಿ ಕೊನೆ ಇಂದು; ಗೋಣಿ ಚೀಲದ ಕೊರತೆ, ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:24 IST
Last Updated 22 ಏಪ್ರಿಲ್ 2017, 6:24 IST
ಮುದ್ದೇಬಿಹಾಳ: ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಕುರಿತು ಪಿಡಿಓ, ಅಧಿಕಾರಿಗಳ ಸಭೆ ನಡೆಸಲು ಬಂದಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಅವರಿಗೆ ಢವಳಗಿ ಭಾಗದ ರೈತರು ಮುತ್ತಿಗೆ ಹಾಕಿ ತೊಗರಿ ಖರೀದಿಸಲು ಗೋಣಿ ಚೀಲದ ಕೊರತೆ ಉಂಟಾಗಿರುವ ಕುರಿತು ತಮ್ಮ ಅಸಹನೆ ಹೊರ ಹಾಕಿದರು.
 
ಜಿಲ್ಲಾಧಿಕಾರಿ ಬರುವ ಮಾಹಿತಿ ಹೊಂದಿದ್ದ ರೈತರು ತಾಲ್ಲೂಕು ಪಂಚಾಯ್ತಿ ಗೇಟ್ ಬಳಿ ಕಾಯುತ್ತಿದ್ದರು. ಈ ಬಗ್ಗೆ ತಿಳಿದ ತಹಶೀಲ್ದಾರ್ ಎಂಎಎಸ್ ಬಾಗವಾನ ತಾವೇ ಬಂದು ರೈತರ ಸಮಸ್ಯೆ ಆಲಿಸಿದರು.
 
ಅಧಿಕಾರಿಗಳ ಜೊತೆ ಮೊಬೈಲ್‌ನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಜಿಲ್ಲಾಧಿ­ಕಾರಿಯನ್ನು ತಡೆಯಬೇಡಿ ಎಂದು ರೈತರನ್ನು ಕೋರಿದ್ದರು.
 
ಆದರೆ ರೈತರು ಜಿಲ್ಲಾಧಿಕಾರಿ ಕಾರು ಗೇಟ್ ಒಳಗೆ ಬರುತ್ತಿದ್ದಂತೆಯೇ ಅವರನ್ನು ಸುತ್ತುವರಿದು ತೊಗರಿ ಖರೀದಿಗೆ ಇರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಕೂಡಲೇ ಗೋಣಿಚೀಲ ಕಳಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
 
ಸರ್ಕಾರದ ಆದೇಶದ ಪ್ರಕಾರ ಇದೇ 22 ತೊಗರಿ ಖರೀದಿಗೆ ಕೊನೆಯ ದಿನ. ಆದರೆ ಢವಳಗಿ ಪಿಕೆಪಿಎಸ್ ಕಾರ್ಯ­ದರ್ಶಿ ನಿಯಮಿತವಾಗಿ ತೊಗರಿ ಕೇಂದ್ರದಲ್ಲಿ ಖರೀದಿ ನಡೆಸುತ್ತಿಲ್ಲ. ಚೀಲಗಳ ಕೊರತೆ ನೆಪ ಹೇಳಿ ಕೇಂದ್ರ ಬಂದ್ ಮಾಡಿದ್ದಾರೆ. ಈ ಕೇಂದ್ರಕ್ಕೆ ಹೆಚ್ಚುವರಿಯಾಗಿ ಇನ್ನೂ 5,000 ಚೀಲ ಕಳಿಸಿಕೊ­ಡಬೇಕು ಎಂದು ಆಗ್ರಹಿಸಿದರು.
 
ಕೇಂದ್ರದಲ್ಲಿದ್ದುಕೊಂಡು ತೊಗರಿ ಮಾರುವುದನ್ನು ಬಿಟ್ಟು ಇಲ್ಲಿಗೇಕೆ ಬಂದಿದ್ದೀರಿ ಎಂದು ರೈತರನ್ನು ಪ್ರಶ್ನಿಸಿದ ಡಿಸಿ, ತೊಗರಿ ಖರೀದಿಗೆ ಒಂದೇ ದಿನ ಉಳಿದಿದ್ದು ಗೊತ್ತಿದ್ದರೂ ಅಲ್ಲಿ ತೊಗರಿ ಮಾರದೇ ಇಲ್ಲಿ ಬಂದು ದೂರಬೇಡಿ. ಮೊದಲು ನಿಮ್ಮ ತೊಗರಿ ಮಾರಾಟ ಮಾಡಿ.
 
ಆಗ ಚೀಲಗಳ ಅವಶ್ಯಕತೆ ಕಂಡುಬಂದಲ್ಲಿ ಕಾರ್ಯದರ್ಶಿ ಜಿಲ್ಲಾಡಳಿತಕ್ಕೆ ಚೀಲಕ್ಕೆ ಬೇಡಿಕೆ ಇಡುತ್ತಾರೆ. ಜಿಲ್ಲಾಡಳಿತ ತಕ್ಷಣ ಚೀಲ ಪೂರೈಸುತ್ತದೆ ಎಂದು ಸಮಜಾಯಿಷಿ ನೀಡಿದರು.
 
ಆದರೂ ರೈತರು ಪಿಕೆಪಿಎಸ್ ಕಾರ್ಯದರ್ಶಿ ವಿರುದ್ಧ ದೂರುಗಳ ಸುರಿಮಳೆ ಸುರಿಸತೊಡಗಿದಾಗ ಕಾರ್ಯ­ದರ್ಶಿ ತಪ್ಪು ಮಾಡಿದ್ದರೆ ಜಿಲ್ಲಾಡಳಿತ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ ನಂತರ ಅಲ್ಲಿಂದ ಸ್ಥಳ ಖಾಲಿ ಮಾಡಿದರು.
 
ವಿನೋದಗೌಡ ಕೊಣ್ಣೂರ, ಎನ್.ಬಿ.ಪಾಟೀಲ, ಸಂಗನ­ಗೌಡ ಹೂಲಗೇರಿ, ಎಸ್.ಎಸ್.­ಬಿರಾ­ದಾರ, ಮುತ್ತು ಹೆಳವರ, ಪಾರಿಶ್ವನಾಥ ಬಬಲಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.