ADVERTISEMENT

ತೊಗರಿ ಖರೀದಿ ಮಾಡದ ಕೇಂದ್ರ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:02 IST
Last Updated 24 ಏಪ್ರಿಲ್ 2017, 5:02 IST
ನಾಲತವಾಡ ಪಟ್ಟಣದ ಎಪಿಎಂಸಿಯ ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಖರೀದಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ರೈತರು ಭಾನುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ನಾಲತವಾಡ ಪಟ್ಟಣದ ಎಪಿಎಂಸಿಯ ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಖರೀದಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ರೈತರು ಭಾನುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು   

ನಾಲತವಾಡ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನೈಜ ರೈತರ ತೊಗರಿ ಖರೀದಿ ಮಾಡದೇ ಇಲ್ಲಿಯ ಕೇಂದ್ರದ ಸಿಬ್ಬಂದಿ ವ್ಯಾಪಾರಸ್ಥರ ಮಾಲನ್ನೇ ಸುಮಾರು 80ರಷ್ಟು ಖರೀದಿಸಿದ್ದಾರೆ. ಈ ಸಂಬಂಧ ಕೇಂದ್ರದಲ್ಲಿ ಕಳೆದ 10-15 ದಿನಗಳಿಂದ ಬಂದ ರೈತರ ತೊಗರಿ ಯನ್ನು ಖರೀದಿಸದೇ ಬೀದಿ ಪಾಲು ಮಾಡಿದ್ದಾರೆ ಎಂದು ಆಕ್ರೋಶಗೊಂಡ ರೈತರು, ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಪಟ್ಟಣದಲ್ಲಿ ನಡೆಯಿತು.

ತೊಗರಿ ಖರೀದಿ ಕೇಂದ್ರ ಪ್ರಾರಂಭ ಗೊಂಡಾಗಿನಿಂದಲೂ ಅಕ್ರಮವಾಗಿ ತೊಗರಿ ಖರೀದಿಸಿದ್ದಾರೆ, ಸಿಬ್ಬಂದಿಗೆ ಹಣದ ಆಮಿಷವೊಡ್ಡಿ ನಿರಂತರವಾಗಿ ಅವ್ಯವಹಾರ ಮಾಡಿದ್ದು, ಇನ್ನೂ ನೈಜ ವಾದ ಸುಮಾರು 50ರಷ್ಟು ರೈತರ ತೊಗರಿ ಉಳಿಯಲು ಕಾರಣ ಮತ್ತು ಈ ವ್ಯವಸ್ಥೆಗೆ ಸಂಭಂದಿಸಿದ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡದಿರುವುದೇ ಕಾರಣ ಎಂದು ಆರೋಪಿಸಿದರು.

ಮೇಲಿಂದ ಮೇಲೆ ರೈತರನ್ನು ತಪ್ಪು ದಾರಿಗೆಳೆದು ನಿಮಗೆ ಕೂಪನ್ ನೀಡಿ ದ್ದೇವೆ. ನಿಯಮಾನುಸಾರ ಖರೀದಿಸು ತ್ತೇವೆ ಎಂದು ಕೇಂದ್ರದ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಮೋಸ ಮಾಡಿದ್ದಾರೆ. ನಮ್ಮ ಸಂಕಷ್ಟಕ್ಕೆ ಯಾರೂ ಈ ಭಾಗದಲ್ಲಿ ನಿಯತ್ತಿನಿಂದ ಸ್ಪಂದಿಸ ಲಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ADVERTISEMENT

ಪಟ್ಟುಬಿಡದ ರೈತರು: ಸದರಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರ ಖಂಡಿಸಿ ಪ್ರತಿಭಟನೆಗಿಳಿದ ರೈತರನ್ನು, ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪ್ರತಿಭಟನೆ ಕೈಬಿಡಿ ಎಂದು ಮುದ್ದೇ ಬಿಹಾಳ ಎಎಸೈ ಬಿ.ಎಸ್.ಹತ್ತಿ, ಸ್ಥಳಿಯ ಮುಖ್ಯಪೇದೆ ಎ.ವೈ.ಸಾಲಿ, ಶ್ರೀಶೈಲ್ ಅವಟಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರೂ ಜಗ್ಗದ ರೈತರು ರಾತ್ರಿ 8 ಗಂಟೆಯವರೆಗೂ ಪ್ರತಿಭಟನೆ ಮೂಲಕ ರಸ್ತೆ ತಡೆಯುವ ನಿರ್ಧಾರ ಕೈಗೊಂಡಿದ್ದೇವೆ ನೀವು ನಮ್ಮ ಹತ್ತಿರ ಬರಬೇಡಿ ಎಂದರು.

ಸದ್ಯ ಖರೀದಿ ಕೇಂದ್ರದಲ್ಲಿ ಬಂದು ವಾಸ್ಯವ್ಯ ಹೂಡಿದ ನಿಜವಾದ ರೈತರನ್ನು ಪತ್ತೆ ಹಚ್ಚಿ ತೊಗರಿ ಪಡೆಯಬೇಕು ಅವಧಿ ಮುಗಿದಿದೆ ಎಂದು ಹೇಳಬಾರದು, ಮಧ್ಯವರ್ತಿಗಳನ್ನು ಪತ್ತೆಹಚ್ಚಿ ಹೊರ ಹಾಕಬೇಕು, ಅವಧಿ ಮುಗಿದಿದೆ ಎನ್ನುವ ಅಧಿಕಾರಿಗಳು ಕೇಂದ್ರಕ್ಕೆ 5 ಸಾವಿರ ಗೋಣಿ ಚೀಲಗಳನ್ನು ಕಳಿಸಿದ್ದೇಕೆ? ಎಂದು ಪ್ರಶ್ನಿಸಿದ ರೈತರು, ನಮ್ಮ ಪಟ್ಟು ತೊಗರಿ ಖರೀದಿಸುವವರೆಗೂ ಮುಂದು ವರೆಯುತ್ತದೆ ಎಂದು ರಸ್ತೆಯಲ್ಲೇ ಬಿಡಾರ ಹೂಡಿದರು.

ಬೆಂಬಲ: ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸ್ಥಳಿಯ ಕನ್ನಡಪರ ಸಂಘಟನೆಗಳಾದ ಕರವೇ (ಪ್ರವೀಣ ಶೆಟ್ಟಿ ಬಣ) ಸಂಘಟನೆಯ ಕಾರ್ಯಕರ್ತರು ರೈತರ ಪ್ರತಿಭಟನೆಗೆ ಸ್ಪಂದಿಸಿದ್ದು ಕೇಂದ್ರದಲ್ಲಿ ರೈತರಿಗೆ ತೊಂದರೆಯಾಗಿದ್ದು ಸಹಿಸಲ್ಲ ಎಂದು ಬೆಂಬಲ ನೀಡಿದರು. ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ ರೈತರೊಂದಿಗೆ ಚರ್ಚಿಸಿ ಸರಿಪಡಿಸುವ ಕುರಿತು ಸಮಾ ಲೋಚನೆ ನಡೆಸಿದರು. ಪ್ರತಿಭಟನೆಯಲ್ಲಿ ಶಿವು ಬಿದರಕುಂದಿ, ವಿರೂಪಾಕ್ಷ ತಾಳಿ ಕೋಟಿ, ನಾಲತವಾಡ ಹೋಬಳಿಯ ಸುತ್ತಲಿನ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.