ADVERTISEMENT

ದಾನಮ್ಮ ದೇವಿ... ಧ್ಯಾನದ ಅನುರಣನ...!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:51 IST
Last Updated 17 ನವೆಂಬರ್ 2017, 6:51 IST

ವಿಜಯಪುರ: ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ, ರಾಜ್ಯದ ಗಡಿಯಂಚಿನ ಗುಡ್ಡಾಪುರದ ದಾನಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಗುರುವಾರ ಅಧಿಕೃತ ಚಾಲನೆ ದೊರೆತಿದೆ.ಅಕ್ಕಲಕೋಟೆಯ ಜಯಸಿದ್ಧೇಶ್ವರ ಸ್ವಾಮೀಜಿ ಅನ್ನ ಪ್ರಸಾದಕ್ಕೆ ಪೂಜೆ ಸಲ್ಲಿಸುವ ಮೂಲಕ ದಾನಮ್ಮ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಶುಕ್ರವಾರ ರಾತ್ರಿ ಸುಕ್ಷೇತ್ರ ಗುಡ್ಡಾಪುರದಲ್ಲಿ ನಡೆಯಲಿರುವ ಕಾರ್ತೀಕ ಮಾಸದ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಯ ಅಪಾರ ಭಕ್ತ ಸಮೂಹ ವಿಜಯಪುರ ನಗರದ ಮೂಲಕ ಗುಡ್ಡಾಪುರಕ್ಕೆ ಪಾದಯಾತ್ರೆಯಲ್ಲಿ ತಂಡೋಪತಂಡವಾಗಿ ತೆರಳಿದ ಚಿತ್ರಣ ಗೋಚರಿಸಿತು.

ಹಾದಿಯುದ್ದಕ್ಕೂ ಸೇವಾ ಕೇಂದ್ರಗಳನ್ನು ದಾನಮ್ಮ ದೇವಿಯ ಭಕ್ತ ಸಮೂಹ ತೆರೆದಿದ್ದು, ಕಾಲ್ನಡಿಗೆಯಲ್ಲಿ ದೇವಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ನಿರತವಾಗಿವೆ. ವಿಜಯಪುರ ಜಿಲ್ಲೆಯ ಎಲ್ಲೆಡೆ ಸೇವಾ ಕೇಂದ್ರ ತಮ್ಮ ಸೇವೆ ಸಲ್ಲಿಸುತ್ತಿರುವುದು ವಿಶೇಷ.

ADVERTISEMENT

ಗುರುವಾರ ಆರಂಭಗೊಂಡಿರುವ ಈ ಸೇವಾ ಕೇಂದ್ರಗಳು ಶನಿವಾರದವರೆಗೂ ನಿರಂತರ ಸೇವೆಯನ್ನು ರಸ್ತೆ ಬದಿ ಒದಗಿಸಲಿವೆ. ಈಗಾಗಲೇ ಭಕ್ತರಿಗೆ ಅದ್ಧೂರಿ ಆತಿಥ್ಯ ನೀಡಲಾಗಿದೆ. ದಾಸೋಹ ಮನೆಗಳು ಸಹ ಪಾದಯಾತ್ರಿಗಳ ಹಸಿವು ತಣಿಸಿವೆ.

ಹಾದಿಯುದ್ದಕ್ಕೂ ಚಹಾ, ಗರಂ ಗರಂ ಮಿರ್ಚಿ, ಭಜ್ಜಿ, ಅವಲಕ್ಕಿ ಸೂಸಲಾ, ಶಿರಾ-ಉಪ್ಟಿಟ್ಟು, ಅವಲಕ್ಕಿ ಚೂಡಾ, ಪೇಡೆ, ಮಸಾಲಾ ಅನ್ನ ಸೇರಿದಂತೆ ನಾನಾ ಆಹಾರ ಪದಾರ್ಥಗಳು ದಾಸೋಹ ಮನೆಗಳಲ್ಲಿ ದೊರೆಯುತ್ತಿವೆ. ಭಕ್ತರು ಹಸಿವಾದೆಡೆ ಪ್ರಸಾದ ಸ್ವೀಕರಿಸಿ, ಬಾಯಾರಿದೆಡೆ ನೀರು ಕುಡಿದು, ಅಲ್ಲಲ್ಲೇ ದಣಿವಾರಿಸಿಕೊಂಡು ಹೆಜ್ಜೆ ಹಾಕುತ್ತಿರುವ ದೃಶ್ಯಾವಳಿ ಗೋಚರಿಸಿತು.

ಕಾಲು ನೋವಿನಿಂದ ಬಳಲುವ ಭಕ್ತ ಸಮೂಹಕ್ಕೆ ಅಲ್ಲಲ್ಲೇ ಸೇವೆಗೈಯುತ್ತಿರುವ ವೈದ್ಯರ ತಂಡ ತಪಾಸಣೆ ನಡೆಸಿ, ನೋವು ನಿವಾರಕ ಮಾತ್ರೆಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

ಧ್ಯಾನದ ಅನುರಣನ: ಜಿಲ್ಲೆಯ ಎಲ್ಲೆಡೆಯಿಂದ ದಾನಮ್ಮ ದೇವಿ ಭಕ್ತರ ಪಾದಯಾತ್ರೆ ಬುಧವಾರದಿಂದ ಆರಂಭಗೊಂಡಿದೆ. ಇದರ ಬೆನ್ನಿಗೆ ಸೇವಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಹಾದಿಯುದ್ದಕ್ಕೂ ದಾನಮ್ಮ ದೇವಿಯ ನಾಮಸ್ಮರಣೆ ಅನುರಣನ ಮಾರ್ದನಿಸುತ್ತಿದೆ.

ಆಬಾಲ ವೃದ್ಧರಾದಿಯಾಗಿ ಪುರುಷ–ಮಹಿಳೆ ಎನ್ನದೇ ಅಪಾರ ಸಂಖ್ಯೆಯ ಭಕ್ತರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಎಲ್ಲರ ಬಾಯಲ್ಲೂ ಹಾದಿಯುದ್ದಕ್ಕೂ ‘ದಾನಮ್ಮ ದೇವಿಗೆ ಜೈ ಜೈ... ತಾಯಿ ತಾಯಿ ದಾನಮ್ಮ ತಾಯಿ... ತಂದೆ ತಂದೆ ಸೋಮನಾಥ ತಂದೆ... ಯಾತ್ರೆ ಯಾತ್ರೆ ಪಾದಯಾತ್ರೆ...’ ಎಂಬ ಘೋಷಣೆಯ ನಾಮಸ್ಮರಣೆ ಕೇಳಿ ಬಂತು.

‘ಬುಧವಾರ ಬೆಳಿಗ್ಗೆ ಶುಚಿರ್ಭೂತರಾಗಿ ಮಲಘಾಣ ಬಿಟ್ಟೆವು. ನಮ್ಮದು ಆರನೇ ವರ್ಷದ ಯಾತ್ರೆ. ಮೊದಲ ವರ್ಷ ಬಿಟ್ಟರೆ, ಉಳಿದ ಎಲ್ಲ ವರ್ಷಗಳು ಸುಲಲಿತವಾಗಿ ಯಾತ್ರೆ ಪೂರೈಸಿದ್ದೇವೆ. ಶುಕ್ರವಾರ ನಸುಕಿನ ವೇಳೆಗೆ ದೇವಿ ಸನ್ನಿಧಿ ತಲುಪುತ್ತೇವೆ.

ಸ್ನಾನ, ದರ್ಶನ, ಪೂಜೆ ಪೂರೈಸಿಕೊಂಡು ರಾತ್ರಿ ನಡೆಯುವ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ ಕಣ್ತುಂಬಿಕೊಳ್ಳಲು ಕಾತರರಾಗಿದ್ದೇವೆ. ಶನಿವಾರ ರಥೋತ್ಸವ ಮುಗಿಸಿಕೊಂಡು ಊರಿಗೆ ಮರಳುತ್ತೇವೆ’ ಎಂದು ಸಿಂದಗಿ ತಾಲ್ಲೂಕು ಮಲಘಾಣ ಗ್ರಾಮದ ಪಾದಯಾತ್ರಿ ತಂಡದ ಈರಣ್ಣ ಕಿರಣಗಿ, ದತ್ತು ಕದಂ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾದಯಾತ್ರಿಗಳಿಗೆ ಅನ್ನ ಪ್ರಸಾದ
ದೇವರಹಿಪ್ಪರಗಿ : ದಾನಮ್ಮ ದೇವಿ ಜಾತ್ರೆಗೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಎಂಟು ವರ್ಷಗಳಿಂದ ಅನ್ನಪ್ರಸಾದ ಹಮ್ಮಿಕೊಳ್ಳುವ ಮೂಲಕ ಪಟ್ಟಣದ ಸಿದ್ದಯ್ಯ ಮಡಿವಾಳಯ್ಯ ಮಠಪತಿ ಭಕ್ತಿ ಮೆರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 218ರ ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ನಾಡಗೌಡ ಪೆಟ್ರೋಲ್ ಪಂಪ್ ಎದುರು ಶಾಮಿಯಾನ್ ಹಾಕಲಾಗಿದೆ. ಚಟ್ಟಿ ಅಮವಾಸ್ಯೆ ಪ್ರಯುಕ್ತ ನಡೆಯುವ ದಾನಮ್ಮದೇವಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡುತ್ತಾರೆ. ‘ಈ ಕಾರ್ಯಕ್ಕೆ ಪಟ್ಟಣದ ಹಲವರು ಕೈ ಜೋಡಿಸಿದ್ದು, ದಾಸೋಹ ನಿರಂತರವಾಗಿ ಸಾಗಲು ಸಹಕಾರವಾಗಿದೆ’ ಎನ್ನುತ್ತಾರೆ ಸಿದ್ದಯ್ಯ ಮಠಪತಿ

* * 

ಮೊದಲ ಬಾರಿಗೆ ಮಾತ್ರ ತ್ರಾಸ್‌ ಎನಿಸಿತು. ಉಳಿದ ವರ್ಷಗಳಲ್ಲಿ ಯಾತ್ರೆ ಉತ್ಸಾಹ ತುಂಬಿದೆ. ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿದೆ. ದೇವಿ ಧ್ಯಾನದಲ್ಲಿ ಸುಲಲಿತವಾಗಿ ನಡೆದಿದೆ
ಬಸವರಾಜ ಬಶೆಟ್ಟಿ, ಮಲಘಾಣ ಗ್ರಾಮದ ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.