ADVERTISEMENT

ನಿಧಿಗಾಗಿ ಪುರಾತನ ದೇವಸ್ಥಾನ ಅಗೆತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 5:43 IST
Last Updated 14 ಸೆಪ್ಟೆಂಬರ್ 2017, 5:43 IST

ನಿಡಗುಂದಿ: ನಿಧಿಗಾಗಿ ಪಟ್ಟಣದ ಹೊರವಲಯದ ವಿರಕ್ತಮಠದ ಹಿಂಭಾಗದಲ್ಲಿನ ಪಾಳು ಬಿದ್ದ ದೇವಸ್ಥಾನವನ್ನು ಪೂಜೆ ಮಾಡಿ ಅಗೆದು ನಿಧಿಗಾಗಿ ಶೋಧ ಮಾಡಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಹೊರವಲಯದ ವಿರಕ್ತ ಮಠದ ಮಾಲೀಕತ್ವದಲ್ಲಿರುವ ಪಾಳು ಬಿದ್ದ ಗಣಪತಿ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ನಿಧಿಗಾಗಿ ಅಗೆಯಲಾಗಿದೆ.
ಸುಮಾರು 200 ವರ್ಷಗಳ ಹಿಂದೆ ಕಟ್ಟಿರುವ ಈ ದೇವಸ್ಥಾನ ಕಳೆದ 50 ವರ್ಷಗಳಿಂದ ಪಾಳು ಬಿದ್ದಿದೆ. 50 ವರ್ಷಗಳ ಹಿಂದೆ ನಿಧಿಗಳ್ಳರೇ ಇಲ್ಲಿಯ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹಗಳನ್ನು ಕಳ್ಳತನ ಮಾಡಿದ್ದಾರೆ, ಹೀಗಾಗಿ ಈ ದೇವಸ್ಥಾನ ಯಾವುದೇ ಪುನರುಜ್ಜೀವನವಿಲ್ಲದೇ ಪಾಳು ಬಿದ್ದಿತ್ತು.

ಈ ಪಾಳು ಬಿದ್ದ ದೇವಸ್ಥಾನದಲ್ಲಿ ನಿಧಿಯಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ, ಹಿರಿಯರಲ್ಲಿ ಊಹಾಪೋಹ ಹಿಂದಿನ ಕಾಲದಿಂದಲೂ ಇದೆ. ಮೇಲಿಂದ ಮೇಲೆ ದೇವಸ್ಥಾನದಲ್ಲಿ ನಿಧಿಗಾಗಿ ಅಲ್ಲಿ ಸಾಕಷ್ಟು ಬಾರಿ ಅಗೆದು ಶೋಧ ನಡೆಸಲಾಗಿದೆ.

ADVERTISEMENT

ಭಾನುವಾರ ರಾತ್ರಿ ವೇಳೆಯಲ್ಲಿ ಪಾಳು ಬಿದ್ದ ದೇವಸ್ಥಾನದ ಸುತ್ತಮುತ್ತ ವಿಭೂತಿ ಕುಂಕುಮ, ಅರಿಷಣ ಹಾಕಿ, ತೆಂಗಿನಕಾಯಿಯನ್ನು ಒಡೆಯಲಾಗಿದೆ. ವಿಗ್ರಹವಿಲ್ಲದ ಗರ್ಭಗುಡಿಯನ್ನು ಅಗೆಯ ಲಾಗಿದೆ. ಅಗೆದಾಗ ಒಂದು ದೊಡ್ಡದಾದ ಕಲ್ಲು ಹತ್ತಿದ್ದು ಅಲ್ಲಿಗೆ ನಿಧಿಗಳ್ಳರು ಬಿಟ್ಟು ಹೋಗಿರಬಹುದೆಂದು ಶಂಕಿಸಲಾಗಿದೆ.

ಪಿಎಸ್ಐ ಭೇಟಿ: ನಿಧಿಗಳ್ಳರು ತೋಡಿ ರುವ ಸ್ಥಳಕ್ಕೆ ವಿರಕ್ತಮಠದ ಮನವಿಯ ಮೇರೆಗೆ ನಿಡಗುಂದಿ ಪಿಎಸ್ಐ ರಾಜೇಶ ಲಮಾಣಿ ಸೋಮವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮಠದ ಉಸ್ತುವಾರಿ ಹೊತ್ತಿರುವ ಮಲ್ಲಿಕಾರ್ಜುನಯ್ಯ ತೊರಗಲಮಠ, ಪಾಳು ಬಿದ್ದಿರುವ ದೇವಸ್ಥಾನದಲ್ಲಿ ನಿಧಿ ಇರಬಹುದೆಂಬ ಶಂಕೆ ಹಲವಾರು ದಿನಗಳಿಂದ ಇದೆ, ವಾಸ್ತವವಾಗಿ ಅದು ನಮಗೂ ಗೊತ್ತಿಲ್ಲ, ಆದರೆ ಭಾನುವಾರ ಮಾತ್ರ ನಿಧಿಗಾಗಿ ಶೋಧ ನಡೆದಿದೆ. ನಮಗೆ ಸೋಮವಾರ ಮಧ್ಯಾಹ್ನ ಗೊತ್ತಾಗಿದೆ. ಗೊತ್ತಾದ ತಕ್ಷಣವೇ ಪೊಲೀಸರು, ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದರು.

ಈಗಾಗಲೇ ವಿಜಯಪುರ ಜಿಲ್ಲಾಧಿಕಾರಿಗಳಿಗೆ ನಿಧಿ ಬಗ್ಗೆ ಮಾಹಿತಿ ನೀಡಲಾಗಿದೆ, ಅಲ್ಲಿ ನಿಧಿ ಇರ ಬಹುದೆಂಬ ಹಲವಾರು ಭಕ್ತರ ಅಭಿಪ್ರಾಯವಾಗಿದೆ, ಜಿಲ್ಲಾಡಳಿತವೇ ಮುಂದೆ ನಿಂತು ಇಲ್ಲಿ ಶೋಧ ಕಾರ್ಯ ನಡೆಸಬೇಕು, ಈ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹಾಗೂ ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆಂದು ತೊರಗಲ್ಲಮಠ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.