ADVERTISEMENT

ಪಾನ ಮುಕ್ತ ಕರ್ನಾಟಕ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:14 IST
Last Updated 3 ಫೆಬ್ರುವರಿ 2017, 6:14 IST

ವಿಜಯಪುರ: ಜಿಲ್ಲಾ ಸಂಯುಕ್ತ ಜನತಾದಳದ ನೇತೃತ್ವದಲ್ಲಿ ‘ನಮ್ಮ ಸಂಕಲ್ಪ ಸಂಪೂರ್ಣ ಪಾನ ಮುಕ್ತ ಕರ್ನಾಟಕ’ ಎಂಬ ಅಭಿಯಾನಕ್ಕೆ ನಗರದಲ್ಲಿ ಈಚೆಗೆ ಚಾಲನೆ ನೀಡಲಾಯಿತು.

ಸಿದ್ಧೇಶ್ವರ ದೇಗುಲದಿಂದ ಆರಂಭಗೊಂಡ ಪಾದಯಾತ್ರೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.  ನೇತೃತ್ವ ವಹಿಸಿದ್ದ ಜೆಡಿಯು ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಶಶಿಕಾಂತ ತಾವರಗೇರಿ ಮಾತನಾಡಿ, ಮದ್ಯಪಾನದ ದುಶ್ಚಟಕ್ಕೆ ದಾಸರಾಗಿ ಅನೇಕರು ತಮ್ಮ ಸುಂದರವಾದ ಭವಿಷ್ಯವನ್ನು ಹಾಳು ಮಾಡಿಕೊ ಳ್ಳುತ್ತಿದ್ದಾರೆ. ತಮ್ಮ ಭವಿಷ್ಯದ ಜತೆಗೆ ತಮ್ಮ ಕುಟುಂಬ ಸದಸ್ಯರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ.

ಕುಡಿತದ ಚಟಕ್ಕೆ ದಾಸರಾಗಿ ಅನೇಕರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಜನರನ್ನು ಸಂಕಷ್ಟಕ್ಕೆ ತಳ್ಳುವ ಮದ್ಯಪಾನವನ್ನು ಈಗಾಗಲೇ ಜನತಾದಳ (ಸಂಯುಕ್ತ) ನಿತೀಶ ಕುಮಾರ್ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಈ ಮಾದರಿಯಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮದ್ಯವನ್ನು ನಿಷೇಧಿಸಿ ತ್ವರಿತಗತಿಯಲ್ಲಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಜೆಡಿಯು ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಪದ್ಮಾ ಸೂರ್ಯವಂಶಿ, ಮಹಿಳಾ ಕಾರ್ಯದರ್ಶಿ ಲಾಲಬಿ ನದಾಫ, ಎಸ್‌ಸಿ, ಎಸ್‌ಟಿ ಘಟಕದ ಕವಲಗಿ, ನಗರ ಉಪ ಸಂಚಾಲಕ ಚಂಚಲಕರ, ಅರ್ಜುನ ಶಿರೂರ, ರೈತ ಮೋರ್ಚಾ ಘಟಕದ ಅನಿಲ ಮುನ್ನು ರೆಡ್ಡಿ, ಯುವ ಘಟಕದ ಶರದ ಪಡೇಕನೂರ, ಅಲ್ಪಸಂಖ್ಯಾತ ಘಟಕದ ರಿಜ್ವಾನ, ಜೆಡಿಯು ಮುಖಂಡ ಶ್ರೀಧರ ನಾರಾಯಣಕರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.