ADVERTISEMENT

ಪೂರ್ವಸಿದ್ಧತಾ ಸಭೆ: ಬಹಿಷ್ಕಾರ

ವಿವಿಧ ಸಂಘಟನೆಗಳಿಗೆ ಆಹ್ವಾನ ನೀಡಿಲ್ಲ: ದಲಿತ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 6:02 IST
Last Updated 31 ಮಾರ್ಚ್ 2015, 6:02 IST

ಇಂಡಿ:  ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಡಾ. ಬಾಬು ಜಗಜೀವನರಾಂ ಅವರ ಜಯಂತ್ಯುತ್ಸವದ ಅಂಗವಾಗಿ ಕರೆದ ಪೂರ್ವ ಸಿದ್ಧತಾ ಸಭೆಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳು ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ಸೋಮವಾರ ನಡೆಯಿತು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಕರೆದ ಸಭೆಯಲ್ಲಿ ‘ಪಟ್ಟಣದ ಎಲ್ಲಾ ಸಂಘಟನೆಗಳ ಮುಖಂಡರನ್ನು ಸಭೆಗೆ ಕರೆದಿಲ್ಲ. ಈ ಸಭೆಗೆ ಅರ್ಥವಿಲ್ಲ’ ಎಂದು ದಲಿತ ಮುಖಂಡ ಪ್ರಶಾಂತ ಕಾಳೆ ಸಭೆ ಬಹಿಷ್ಕರಿಸಿ ಹೊರನಡೆದರು. ಸಭೆಯಲ್ಲಿ ಹಾಜರಿದ್ದ ಇತರೆ ದಲಿತ ಸಂಘಟನೆಗಳ ಮುಖಂಡರು ಸಹ ಅವರನ್ನು ಹಿಂಬಾಲಿಸಿ ಸಭೆ ಬಹಿಷ್ಕರಿಸಿದರು.

‘ರಾಷ್ಟ್ರದ ದಲಿತ ನಾಯಕರ ಜಯಂತ್ಯುತ್ಸವವನ್ನು ತಾಲ್ಲೂಕಿನ ಎಲ್ಲಾ ಸಂಘಟನೆಗಳು ಮತ್ತು ಅಧಿಕಾರಿಗಳು ಸೇರಿ ಮಾಡಬೇಕು. ಅದನ್ನು ಬಿಟ್ಟು ಕೇವಲ ದಲಿತ ಸಂಘಟನೆಗಳ ಪದಾಧಿಕಾರಿಗಳನ್ನು ಮಾತ್ರ ಸಭೆಗೆ ಆಹ್ವಾನಿಸಿರುವುದು ಸರಿಯಲ್ಲ’ ಎಂದು ಪ್ರಶಾಂತ ಕಾಳೆ ಅಸಮಧಾನ ವ್ಯಕ್ತಪಡಿಸಿದರು.

ಡಾ. ಬಿ.ಆರ್‌.ಅಂಬೇಡ್ಕರ್‌ ಮತ್ತು ಡಾ. ಬಾಬು ಜಗಜೀವನರಾವ್‌ ಅವರು ದೇಶದ ದೇಶದ ಆಸ್ತಿಯಾಗಿದ್ದರು. ಅವರ ಜಯಂತ್ಯುತ್ಸವಕ್ಕೆ ತಾಲ್ಲೂಕು ಆಡಳಿತ ತಾರತಮ್ಯ ಮಾಡುತ್ತಿದೆ. ಈ ಸಭೆಯನ್ನು ಮೊಟಕುಗೊಳಿಸಿ, ಮತ್ತೊಮ್ಮೆ ಸಭೆ ಕರೆಯಬೇಕೆಂದು ಆಗ್ರಹಿಸಿದರು. ದಲಿತ ಮುಖಂಡರಾದ ಗಣಪತಿ ಬಾಣಿಕೋಲ, ಭೀಮಾಶಂಕರ ಮೂರಮನ, ಪ್ರದೀಪ ಮೂರಮನ, ಮುಕುಂದ ಕಾಂಬಳೆ ಸೇರಿದಂತೆ ಇತರೆ ದಲಿತ ಮುಖಂಡರು ಅವರನ್ನು ಬೆಂಬಲಿಸಿದರು.

ಇದರಿಂದ ತಾಲ್ಲೂಕು ಆಡಳಿತ ಸಭೆಯನ್ನು ಮುಂದೂಡಿದ್ದು, ಇದೇ 31 ರಂದು ಮಧ್ಯಾಹ್ನ 3.30 ಗಂಟಗೆ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ ರಾಜಶೇಖರ ಡಂಬಳ ಪ್ರಕಟಿಸಿದರು. ಈ ಸಭೆಗೆ ಪಟ್ಟಣದ ಎಲ್ಲಾ ಸಮಘಟನೆಗಳ ಮುಖಂಡರನ್ನು, ಹಿರಿಯರನ್ನು ಮತ್ತು ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿ­ಗಳನ್ನು ತಪ್ಪದೇ ಆವ್ಹಾನಿಸಬೇಕೆಂದು ಸಮಾಜ ಕಲ್ಯಾಣಾಧಿಕಾರಿ ಬಿ.ಜೆ.ಇಂಡಿ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.