ADVERTISEMENT

ಬರ ಪರಿಹಾರ ಶೀಘ್ರ ವಿತರಣೆಗೆ ಆಗ್ರಹ

ರೈತ ಸಂಘದಿಂದ ವಿಜಯಪುರದಲ್ಲಿ ಪ್ರತಿಭಟನಾ ರ್‌್ಯಾಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:05 IST
Last Updated 10 ಜನವರಿ 2017, 7:05 IST
ವಿಜಯಪುರ: ಜಿಲ್ಲೆಯಲ್ಲಿ ಸಮರ್ಪಕವಾಗಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಧನ ವಿತರಣೆ ಮಾಡು ವಂತೆ ಒತ್ತಾಯಿಸಿ ವಿವಿಧ ರೈತ ಸಂಘ ಟನೆಗಳು ಜಂಟಿಯಾಗಿ ಸೋಮವಾರ ಬೃಹತ್ ಪ್ರತಿಭಟನಾ ರ್‌್ಯಾಲಿ ನಡೆಸಿದವು.
 
ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತಲುಪಿತು. ಅಖಂಡ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಅನೇಕ ರೈತ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
 
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ ಸಕಾಲಕ್ಕೆ ಮಳೆಯಾಗದೆ ರೈತರು ಬೆಳೆದ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸತತ 3–-4 ವರ್ಷಗಳಿಂದ ವಿಜಯಪುರ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿದ್ದು, ರೈತರ ಬದುಕು ಸಂಕಷ್ಟಮಯವಾಗಿದೆ.
 
ಮೊದಲೇ ಬರಗಾಲದಿಂದ ತತ್ತರಿಸಿದ ರೈತರು ತುಂಬಾ ಸಂಕಷ್ಟ ದಲ್ಲಿದ್ದು, ಬರಗಾಲ, ಬಡತನ, ನಿರುದ್ಯೋಗದಿಂದಾಗಿ, ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸರ್ಕಾರ ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಲ್ಪಿಸಬೇಕು, ಈ ರಸ್ತೆಗಳನ್ನು ಹಂಚಿಕೆ ಮಾಡುವ ಅಧಿಕಾರವನ್ನು ತಹಶೀಲ್ದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
 
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ ಸಕಾಲಕ್ಕೆ ಮಳೆ ಆಗದೇ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ಘೋಷಿಸಬೇಕು. ಕಡಲೆ, ಜೋಳ, ಗೋಧಿ ಸಹ ಹಾಳಾಗಿದ್ದು, ಈ ಎಲ್ಲ ಬೆಳೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. 
ವಿವಿಧ ರೈತ ಸಂಘಟನೆಗಳ ಪ್ರಮುಖರಾದ ಗೌಡಪ್ಪಗೌಡ ಮೈಗೂರ, ಅಣ್ಣಾರಾಯ ಈಳಗೇರ, ಭಗವಾನ್ ರೆಡ್ಡಿ, ಪ್ರಕಾಶ ಹಿಟ್ನಳ್ಳಿ, ಬಾಳು ಜೇವೂರ ಪ್ರತಿಭಟನೆ ನೇತೃತ್ವ ವಹಿಸಿದ್ದರು.
 
***
ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆಯಷ್ಟೇ. ಸಮರ್ಪಕವಾಗಿ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ
-ಅರವಿಂದ ಕುಲಕರ್ಣಿ
ಸಂಘಟನೆ ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.