ADVERTISEMENT

ಬಿಜೆಪಿ ಮುಖಂಡರಿಂದ ಜನರ ದಾರಿ ತಪ್ಪಿಸುವ ಯತ್ನ

ವಿಜಯಪುರ ನಗರ ಶಾಸಕ ಡಾ. ಬಾಗವಾನ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2017, 8:51 IST
Last Updated 25 ಮೇ 2017, 8:51 IST
ವಿಜಯಪುರದ ಚಾಂದನಿ ಹಾಲ್‌ನಲ್ಲಿ ಬುಧವಾರ ನಡೆದ ಪಿಂಜಾರ–-ನದಾಫ ಸಮಾಜದ ಸಮಾರಂಭದಲ್ಲಿ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಮಾತನಾಡಿದರು
ವಿಜಯಪುರದ ಚಾಂದನಿ ಹಾಲ್‌ನಲ್ಲಿ ಬುಧವಾರ ನಡೆದ ಪಿಂಜಾರ–-ನದಾಫ ಸಮಾಜದ ಸಮಾರಂಭದಲ್ಲಿ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಮಾತನಾಡಿದರು   

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಪಿಂಜಾರ–-ನದಾಫ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ ದೂರಿದರು.

ನಗರದ ಚಾಂದನಿ ಸಭಾಂಗಣದಲ್ಲಿ ರಾಜ್ಯ ನದಾಫ-/ಪಿಂಜಾರ ಸಂಘದ ನೇತೃತ್ವದಲ್ಲಿ ನಡೆದ ನದಾಫ ಹಾಗೂ ಪಿಂಜಾರ ಸಮಾಜದ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ನಾಯಕರು ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಸ್ತಾನದಲ್ಲಿ ಪಿಂಜಾರ/-ನದಾಫ ಸಮಾಜದ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ, ಅಲ್ಲಿ ಬಿಜೆಪಿ ಸರ್ಕಾರವೇ ಇದೆ, ಆದರೆ ಅಲ್ಲಿ ಪಿಂಜಾರ/-ನದಾಫ ಸಮಾಜ ಅಭಿವೃದ್ಧಿ ನಿಗಮವನ್ನು ಸ್ಥಾಪಿ ಸಲು ಬಿಜೆಪಿ ಸರ್ಕಾರ ಮುಂದಾಗಿಲ್ಲ. ಈಗ ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಾಗ ಬಿಜೆಪಿ ನಾಯಕರು ಅಭಿವೃದ್ಧಿ ನಿಗಮದ ಆಶ್ವಾಸನೆ ನೀಡಿ ಪಿಂಜಾರ ಸಮಾಜದ ದಾರಿ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಬಾಗವಾನ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಮಾತ್ರ ಅಲ್ಪಸಂಖ್ಯಾತರಾದಿಯಾಗಿ ಎಲ್ಲ ವರ್ಗ ಗಳ ಹಿತರಕ್ಷಣೆ ಬಯಸುವ ಪಕ್ಷವಾಗಿದೆ. ಕಾಂಗ್ರೆಸ್‌ನಿಂದ ಮಾತ್ರ ಸರ್ವ ಸಮಾಜಗಳ ಏಳ್ಗೆ ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದರು.

ನಿಗಮ ಸ್ಥಾಪಿಸಿ; -ಬೇಡಿಕೆ ಈಡೇರಿಸಿ: ಸಮಾವೇಶದಲ್ಲಿ ಅಪಾರ ಸಂಖ್ಯೆ ಯಲ್ಲಿ ಜಮಾಯಿಸಿದ್ದ ಪಿಂಜಾರ/-ನದಾಫ ಸಮಾಜದ ಜನತೆ ಪ್ರಗತಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.

ಪಿಂಜಾರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದೆ. ಡಾ.ಸಿ.ಎಸ್‌. ದ್ವಾರಕನಾಥ್ ವರದಿ ಸಹ ಪಿಂಜಾರ ಸಮಾಜದ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಪಿಂಜಾರ ಸಮಾಜದ ಪ್ರಗತಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಆ ಮೂಲಕ ಪಿಂಜಾರ ಸಮಾಜದ ಜನತೆಗೆ ಸಾಲ ಸೌಲಭ್ಯ, ಧನಸಹಾಯ, ಗೃಹ ಕೈಗಾರಿಕೆ ಸ್ಥಾಪನೆ ಮಾಡಲು ನೆರವು, ಮಕ್ಕಳಿಗೆ ಶಿಷ್ಯವೇತನ ಸೇರಿದಂತೆ ಹತ್ತಾರು ಯೋಜನೆಗಳನ್ನು ರೂಪಿಸ ಬೇಕು ಎಂದು ಸಮಾಜದ ಜನತೆ ಆಗ್ರಹಿಸಿದರು.

ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಅನೀಸ್‌ ಫಾತಿಮಾ ಬಕ್ಷಿ ಪಾಲ್ಗೊಂಡಿದ್ದರು. ಸಮಾಜದ ಮುಖಂಡರಾದ ರಾಜ್ಯ ಘಟಕದ ಅಧ್ಯಕ್ಷ ಎಂ.ಎಂ.ನದಾಫ, ಬಿ.ಬಿ.ಪಿಂಜಾರ, ಪಿ.ಬಿ.ನದಾಫ, ಎಂ.ಕೆ.ನದಾಫ‌, ಹಜರತ್‌ ಅಲಿ ಎಂ. ದೊಡಮನಿ, ಬಿ.ಮಹ್ಮದ್‌, ಎನ್.ಎಫ್. ನದಾಫ, ಪಿ.ಇಮಾಮಸಾಬ್‌ ನದಾಫ‌,  ಉಪಸ್ಥಿತರಿದ್ದರು.

*
ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದಾಗ ಬಿಜೆಪಿ ನಾಯಕರು ಅಭಿವೃದ್ಧಿ ನಿಗಮದ ಆಶ್ವಾಸನೆ ನೀಡಿ ಪಿಂಜಾರ ಸಮಾಜದ ದಾರಿ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
-ಡಾ.ಮಕ್ಬೂಲ್ ಬಾಗವಾನ,
ನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT