ADVERTISEMENT

ಬಿಡಾಡಿ ದನಗಳ ಹಾವಳಿ: ದನ ಕಟ್ಟಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 7:24 IST
Last Updated 19 ನವೆಂಬರ್ 2017, 7:24 IST
ಮುದ್ದೇಬಿಹಾಳದಲ್ಲಿ ಹೆಚ್ಚಾಗಿರುವ ಬಿಡಾಡಿ ದನಗಳನ್ನು ಬೇರೆಡೆ ಸಾಗಿಸಲು ಆಗ್ರಹಿಸಿ ಅಪಾರ ನಾಗರಿಕರು ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆಗೆ ಮನವಿ ಸಲ್ಲಿಸಿದರು
ಮುದ್ದೇಬಿಹಾಳದಲ್ಲಿ ಹೆಚ್ಚಾಗಿರುವ ಬಿಡಾಡಿ ದನಗಳನ್ನು ಬೇರೆಡೆ ಸಾಗಿಸಲು ಆಗ್ರಹಿಸಿ ಅಪಾರ ನಾಗರಿಕರು ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟೆಗೆ ಮನವಿ ಸಲ್ಲಿಸಿದರು   

ಮುದ್ದೇಬಿಹಾಳ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ತೀವ್ರವಾಗಿದೆ. ಕೂಡಲೇ ಅವುಗಳನ್ನು ಬೇರೆಡೆ ಸಾಗಿಸಬೇಕು ಎಂದು ಆಗ್ರಹಿಸಿ ನೂರಾರು ನಾಗರಿಕರು ಶನಿವಾರ ದನಗಳ ಸಮೇತ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪ್ರತಿ ಸಲ ಈ ಬೀದಿ ದನ ಕರುಗಳನ್ನು ನಿಯಂತ್ರಿಸಿ ಎಂದು ಮನವಿ ಕೊಡುತ್ತಿದ್ದರು. ಆದರೆ ಈ ಸಲ ‌ಬೀದಿ ದನಗಳನ್ನೇ  ಪುರಸಭೆಯ ದ್ವಾರ ಬಾಗಿಲಿಗೆ ಕಟ್ಟಿ ಯಾರೂ ಒಳಗೆ ಹೋಗದಂತೆ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಹುಸೇನಬಾಷಾ (ಪಿಂಟು) ಸಾಲಿಮನಿ, ಬಿಡಾಡಿ ದನಗಳು ಎಲ್ಲೆಂದರಲ್ಲಿ ನುಗ್ಗಿ ದಾಂಧಲೆ ಮಾಡುತ್ತವೆ. ಜನರಿಗೆ ದಾರಿ ಬಿಡದೇ ರಸ್ತೆಯಲ್ಲಿಯೇ ಮಲಗಿ, ಓಡಾಡಿ ಬಹಳಷ್ಟು ತೊಂದರೆ ಮಾಡುತ್ತಿವೆ. ಇವುಗಳಿಂದ ಹಲವು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇವುಗಳನ್ನು ನಿಯಂತ್ರಿಸುವಂತೆ ಕೋರಿ ಸಾಕಷ್ಟು ಸಲ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ADVERTISEMENT

ಬಿಡಾಡಿ ದನ ಕರುಗಳನ್ನು ಬೇರೆಡೆ ಸಾಗಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಾಗುವ ಅನಾಹುತಗಳಿಗೆ ಪುರಸಭೆಯೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಎಂ.ಎಲ್.ನಾಯ್ಕೋಡಿ, ಎಸ್.ವೈ.ಮಡಿವಾಳರ, ಶಾಜಾದಬಿ ಹುಣಸಗಿ, ಸಂಗು ಮಡಿವಾಳರ, ಎಂ.ಎ.ಹುಣಚಗಿ, ಹುಸೇನಬಾಷಾ ಮಾಗಿ, ಟಿ.ಎಂ.ನಾಗರಾಳ, ಡಿ.ಎಚ್.ಸಂಕನಾಳ, ಬಿ.ಎಂ.ದೇಸಾಯಿ, ಎಂ.ಎಸ್.ಸಂಕನಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.