ADVERTISEMENT

ಮಳೆ, ಬೆಳೆಗಾಗಿ ದೇವಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:50 IST
Last Updated 24 ಮೇ 2017, 8:50 IST

ಬಸವನಬಾಗೇವಾಡಿ: ಪಟ್ಟಣದ ಲಕ್ಷ್ಮೀ ನಗರದಲ್ಲಿನ ಮರಗಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ದೇವಿಯ ಮೂರ್ತಿ ಹಾಗೂ ಕಳಸದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಿಂದಿ ನಿಂದಲೂ ಹಿರಿಯರು ಹಾಕಿಕೊಟ್ಟ ಸಂಪ್ರದಾಯವಾಗಿದೆ ಎಂದರು.

‘ಮುಂಗಾರು ಮಳೆ ಆರಂಭವಾಗುವ ಮುನ್ನ ಉತ್ತಮ ಮಳೆ ಬರಲಿ ಎಂದು ಪ್ರಾರ್ಥಿಸುವುದರೊಂದಿಗೆ ಜನ, ಜಾನುವಾರಗಳಿಗೆ ರೋಗ ರುಜಿನಗಳು ಬಾರದಿರಲಿ ಎಂದು ರೈತ ಕುಟುಂಬ ದವರು ಸೇರಿದಂತೆ ಜನರು ಪ್ರಾರ್ಥಿಸು ತ್ತಾರೆ. ಸಂಪ್ರದಾಯಗಳು ನಮಗೆ ಸಂಸ್ಕಾರ ಕಲಿಸುತ್ತವೆ. ಪ್ರತಿಯೊಬ್ಬರೂ ಸಂಸ್ಕಾರಯುತ ಜೀವನ ನಡೆಸುವಂತಾಗ ಬೇಕು’ ಎಂದು ಹೇಳಿದರು.

ಮರಗಮ್ಮ ದೇವಿ ಹಾಗೂ ಕಳಸದ ಮೆರವಣಿಗೆಯು ಬಸವತೀರ್ಥದಿಂದ ದೇವಸ್ಥಾನಕ್ಕೆ ತಲುಪಿದ ನಂತರ ದೇವಿಗೆ ಉಡಿ ತುಂಬು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಅಂಬೋಜಿ ಪವಾರ, ಶಂಕರ ಘಾಟಗೆ, ಪರಶುರಾಮ ಅಡಗಿಮನಿ, ಪ್ರವೀಣ ಪವಾರ, ರಾಜು ಬಿಜಾಪುರ, ಸಂಗು ಕುಂಬಾರ, ಬಸವರಾಜ ಬಿಜಾಪುರ, ಪ್ರಕಾಶ ಮಾಲ ಗಾರ, ಶಿವು ಮೇಟಿ, ಸಂತೋಷ ಚಿಂಚೋಳಿ, ಸಂಗು ಪಡಶೆಟ್ಟಿ, ಮಹಾಂತೇಶ ಸುಂಕದ, ಮಾಂತು ಅವಟಿ  ಇದ್ದರು. 

ADVERTISEMENT

ಗ್ರಾಮದೇವತೆಗೆ ಉಡಿ ತುಂಬಿದ ಮಹಿಳೆಯರು:  ಮಳೆ, ಬೆಳೆಗಾಗಿ ಪ್ರಾರ್ಥಿಸಿ ಮಂಗಳವಾರ ಗ್ರಾಮ ದೇವಿಯ ಉಡಿ ತುಂಬುವ ಕಾರ್ಯಕ್ರಮ ದಲ್ಲಿ ಜನರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಮುಂಗಾರು ಮಳೆ ಆರಂಭವಾಗುವ ಮುನ್ನ ಜನರು ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಗ್ರಾಮಗಳಲ್ಲಿ ಗ್ರಾಮದೇವಿಗೆ ವಾರ ಹಿಡಿಯುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ.

ಮುಂಗಾರು ಮಳೆ ಆರಂಭವಾಗುವ ಮುನ್ನವೇ ಗ್ರಾಮಗಳಲ್ಲಿ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ ಜರುಗುತ್ತದೆ ಎಂದು ಪಟ್ಟಣದ ಗ್ರಾಮದೇವಿಯ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ತಿಳಿಸಿದರು. ಪಟ್ಟಣದ ಗ್ರಾಮದೇವಿ (ದ್ಯಾಮವ್ವದೇವಿ)ಯ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಬಾವಿಯಲ್ಲಿ ಗಂಗಸ್ಥಳ ನೆರವೇರಿತು.

ನಂತರ ದ್ಯಾಮವ್ವದೇವಿ ಮೂರ್ತಿಯ ಮೆರವಣಿಗೆ ಪ್ರಮುಖ ಬೀದಿಯ ಮೂಲಕ ದೇವಸ್ಥಾನಕ್ಕೆ ತಲುಪಿತು. ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿದ ನಂತರ  ಕರ್ಪೂರದ ಆರತಿಯೊಂದಿಗೆ ಭಕ್ತರು ದೇವಿಗೆ ನಮನ ಸಲ್ಲಿಸಿದರು. ಪಟ್ಟಣದ ಜನರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಕಾಯಿ, ಕರ್ಪೂರ, ನೈವೇದ್ಯದೊಂದಿಗೆ ದೇವಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.

ಸಂಜೆ ದೇವಸ್ಥಾನದಲ್ಲಿ ಸುಮಂಗಲೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಗ್ರಾಮದೇವತೆಯ ಮೆರವಣಿಗೆಯಲ್ಲಿ ಸಿದ್ದಪ್ಪ ಪರಮಗೊಂಡ, ವಿರುಪಾಕ್ಷಪ್ಪ ನಿಡಗುಂದಿ, ಚನ್ನಪ್ಪ ನಿಡಗುಂದಿ, ಎಂ.ಜಿ.ಆದಿಗೊಂಡ, ಆರ್‌.ಜಿ.ಅಳ್ಳಗಿ, ಬಸವರಾಜ ಅವಟಿ, ಸೋಮಪ್ಪ ಸಾರವಾಡ, ಬಸವರಾಜ ಹಾರಿವಾಳ,  ಪಾಲ್ಗೊಂಡಿದ್ದರು.

ಸಂಭ್ರಮದ ಉತ್ಸವ
ತಾಳಿಕೋಟೆ: ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಜರುಗುವ ಡಾ.ಅಂಬೇಡ್ಕರ್‌ ನಗರದ ಮರಗಮ್ಮ ದೇವಿ ಜಾತ್ರೆಯು ಮಂಗಳವಾರ ಭಕ್ತಿ ಶ್ರದ್ಧೆ ಸಂಭ್ರಮಗಳಿಂದ ನೆರವೇರಿತು.

ಸಂಪ್ರದಾಯದಂತೆ ಪಟ್ಟಣದ ಬಾಪುಗೌಡ ಪಾಟೀಲ, ಮರಗಮ್ಮ ದೇವತೆಗೆ ಪ್ರಥಮ ಪೂಜೆ ನೆರವೇರಿಸಿ, ದೇವತೆಗೆ ಉಡಿ ತುಂಬಿದರು. ನಂತರ ಅಂಬಾಭವಾನಿ ಮಂದಿರದ ಬಳಿ ದೇವತೆಗೆ ಪೂಜಾ ಕಾರ್ಯಕ್ರಮವನ್ನು ಅರ್ಚಕ ಗಂಗಣ್ಣ ಬಡಿಗೇರ ನೆರವೇರಿಸಿದರು.

ಅಂಬಾಭವಾನಿ ಮಂದಿರದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾಯ್ದು ಡಾ.ಅಂಬೇಡ್ಕರ್‌ ಓಣಿ ಯಲ್ಲಿ ರುವ ದೇವಸ್ಥಾನವನ್ನು ಪ್ರವೇಶಿಸಿತು. ಡೊಳ್ಳು ಕುಣಿತ, ಬಾಜಾ ಭಜಂತ್ರಿ ಯೊಂದಿಗೆ 50ಕ್ಕೂ ಅಧಿಕ ಮಹಿಳೆಯರು ಕುಂಭ ಕಳಸ ಹೊತ್ತು ಪಾಲ್ಗೊಳ್ಳುವ ಮೂಲಕ ಮೆರವಣಿಗೆಎ ಶೋಭೆ ತಂದರು. 

ಸಮಾಜದ ಹಿರಿಯರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಸೈದಪ್ಪ ಬಿ.ಕಟ್ಟಿಮನಿ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪುರ,  ಮಲ್ಲಪ್ಪ ಕಟ್ಟಿಮನಿ, ಸಿದ್ರಾಮ ಚಮಲಾಪುರ,  ಸಿದ್ರಾಮ ಬಸಪ್ಪ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.