ADVERTISEMENT

ರಂಗ ಸಜ್ಜಿಕೆಗೆ ಬೆಂಕಿ: ಅಪಾರ ನಷ್ಟ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 9:11 IST
Last Updated 23 ಮಾರ್ಚ್ 2017, 9:11 IST
ಅಗ್ನಿಗಾಹುತಿಯಾದ ಖುರ್ಚಿಗಳು
ಅಗ್ನಿಗಾಹುತಿಯಾದ ಖುರ್ಚಿಗಳು   

ವಿಜಯಪುರ: ಇಲ್ಲಿನ ವಜ್ರ ಹನುಮಾನ ನಗರ ಬಳಿಯ ವಿಶಾಲ ಪ್ರದೇಶದಲ್ಲಿ ಹಾಕಲಾಗಿದ್ದ ರಂಗ ಸಜ್ಜಿಕೆಗೆ (ಟೆಂಟ್‌) ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾದ ಘಟನೆ ಬುಧವಾರ ನಡೆದಿದ್ದು, ಕಲಾ ವಿದರು ಅಪಾಯದಿಂದ ಪಾರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಗುಡ ಗೇರಿಯ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ವತಿಯಿಂದ ‘ಇದ್ದಾಗ ಬರ್ತಾರ–-ಬಿದ್ದಾಗ ನಗ್ತಾರ’ ಎನ್ನುವ ನಾಟಕ ಇಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಈ ನಾಟಕಕ್ಕಾಗಿ ಕಲಾವಿದರು ತಾಲೀಮಿನಲ್ಲಿ ತೊಡಗಿದ್ದಾಗ ಏಕಾಏಕಿ ಬೆಂಕಿ ಕಾಣಿಸಿ ಕೊಂಡಿದೆ.

ತಕ್ಷಣವೇ ಕಲಾವಿದರು ಟೆಂಟ್‌ನಿಂದ ಹೊರಗೆ ಓಡಿದ್ದಾರೆ, ನಂತರ ಬೆಂಕಿ ನಂದಿಸುವ ಪ್ರಯತ್ನ ಮಾಡಿ ವಿಫಲರಾಗಿ ದ್ದಾರೆ. ಬೆಂಕಿಯ ಕೆನ್ನಾಲಿಗೆ ಪ್ರಬಲವಾಗಿ ವ್ಯಾಪಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆಯ ತಂಡ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾ ಯಿತು. ಅಗ್ನಿಶಾಮಕ ದಳದ ಎರಡು ವಾಹನ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು.

ಬೆಂಕಿ ಹೊತ್ತಿಕೊಂಡ ಕಾರಣ ನಿಗೂಢವಾಗಿದೆ. ಅಗ್ನಿ ಅವಘಡ ದಿಂದಾಗಿ ಟೆಂಟ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ, ಪ್ಲಾಸ್ಟಿಕ್ ಖುರ್ಚಿ ಗಳು ಸುಟ್ಟಿವೆ, ಬ್ಯಾನರ್, ರಂಗಭೂಮಿಗೆ ಸಂಬಂಧಿಸಿದ ಪರಿಕರಗಳು, ಲೈಟಿಂಗ್, ಮೈಕ್‌ಗಳು ಅಗ್ನಿಗಾಹುತಿಯಾಗಿದ್ದು, ಅಂದಾಜು ₹ 10ರಿಂದ 12 ಲಕ್ಷ ನಷ್ಟವಾಗಿದೆ ಎಂದು ನಾಟಕ ಕಂಪೆನಿಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT