ADVERTISEMENT

ರಾಷ್ಟ್ರೀಯ ಜಲ ಸಮಾವೇಶ 16ರಿಂದ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 5:21 IST
Last Updated 7 ಆಗಸ್ಟ್ 2017, 5:21 IST

ವಿಜಯಪುರ: ದೇಶಾದ್ಯಂತ ಹಮ್ಮಿ ಕೊಳ್ಳಲಾದ ಜಲ ಸಾಕ್ಷರತಾ ಯಾತ್ರೆಯು ಆಗಸ್ಟ್ 15ರಂದು ನಗರದಲ್ಲಿ ಸಮಾಪ್ತಿ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ 16ರಿಂದ 18ರವರೆಗೆ ರಾಷ್ಟ್ರೀಯ ಜಲ ಸಮಾವೇಶ ಹಮ್ಮಿಕೊಳ್ಳಲು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ‘ಬರ ಮುಕ್ತ ಭಾರತಕ್ಕಾಗಿ ದೇಶಾದ್ಯಂತ ಜಲಸಾಕ್ಷರತಾ ಯಾತ್ರೆಗಳು ಈಗಾಗಲೇ ಎರಡು ತಂಡಗಳಾಗಿ ಸಂಚರಿಸುತ್ತಿವೆ. ಜಲತಜ್ಞ ರಾಜೇಂದ್ರಸಿಂಗ್ ನೇತೃತ್ವದಲ್ಲಿ ತರುಣ ಭಾರತ ಸಂಘ ಹಾಗೂ ರಾಷ್ಟ್ರೀಯ ಜಲ ಬಿರಾದರಿ ಸಂಸ್ಥೆಗಳು ಈ ಯಾತ್ರೆ ಹಮ್ಮಿಕೊಂಡಿವೆ’ ಎಂದರು.

‘ಯಾತ್ರೆ ಕೈಗೊಂಡಿರುವ ತಂಡಗಳು ವಿವಿಧ ರಾಜ್ಯಗಳ ಮೂಲಕ ಸಂಚರಿಸಿ ಕಾಶ್ಮೀರ ಮತ್ತು ಗುವಾಹಟಿ ತಲುಪಲಿವೆ. ಹಾಗಾಗಿ, ಇದೇ 15ರಂದು ನಗರದಲ್ಲಿ ಜಲ ಸ್ವಾತಂತ್ರ್ಯ ದಿನಾಚರಣೆ ಹಾಗೂ 16ರಿಂದ 18ರವರೆಗೆ ಬರ ಮುಕ್ತ ಭಾರತಕ್ಕಾಗಿ 3 ದಿನ ರಾಷ್ಟ್ರೀಯ ಜಲ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಜಲಸಂಪನ್ಮೂಲ ಇಲಾಖೆ, ಜಿಲ್ಲಾಡಳಿತ ಹಾಗೂ ಜಲ ಬಿರಾದಾರಿ ಸಹಯೋಗದೊಂದಿಗೆ ನಗರದ ಬಿಎಲ್‌ಡಿಇ ವಿಶ್ವವಿದ್ಯಾಲಯ ಆವರಣದಲ್ಲಿ  ಸಮಾವೇಶ ನಡೆಯಲಿದೆ. ಈ ನಿಟ್ಟಿನಲ್ಲಿ ರಚಿಸಲಾದ ಸ್ವಾಗತ ಸಮಿತಿ, ವೇದಿಕೆ ಸಮಿತಿ, ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಆತಿಥ್ಯ ಸಮಿತಿ, ಆಹಾರ ಸಮಿತಿ, ಭದ್ರತಾ ಸಮಿತಿ, ಸ್ವಚ್ಛತಾ ಹಾಗೂ ಕುಡಿಯುವ ನೀರಿನ ಸಮಿತಿ, ಮಾಧ್ಯಮ ಹಾಗೂ ಪ್ರಚಾರ ಸಮಿತಿ, ಸ್ವಯಂ ಸೇವಕ ಸಮಿತಿ, ಹಣಕಾಸು ಸಮಿತಿ, ಸಾಂಸ್ಕೃತಿಕ ಸಮಿತಿ, ತಾಂತ್ರಿಕ ಗೋಷ್ಠಿ ಸಮಿತಿ ಹಾಗೂ ವೈದ್ಯಕೀಯ ಸಮಿತಿಗಳು ಸಮಾವೇಶಕ್ಕೆ ಅಗತ್ಯ ಸಿದ್ಧತೆ ಮಾಡಿ ಕೊಳ್ಳಬೇಕು’ ಎಂದು ಸೂಚಿಸಿದರು.

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಜಲ ತಜ್ಞ ರಾಜೇಂದ್ರಸಿಂಗ್, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ನವ ದೆಹಲಿಯ ಪಿ.ವಿ. ರಾಜಗೋಪಾಲ್, ಆಂಧ್ರಪ್ರದೇಶದ ಸತ್ಯನಾರಾಯಣ, ತಮಿಳುನಾಡಿನ ಗುರುಸ್ವಾಮಿ, ಗೋವಾದ ಕುಮಾರ ಕಲಾನಂದ ಮಣಿ, ಡಾ.ಡಿ.ಪಿ. ಬಿರಾದಾರ, ಪ್ರೊ. ವಿಕ್ರಂ ಸೇರಿದಂತೆ ವಿಜ್ಞಾನಿಗಳು ಹಾಗೂ ತಜ್ಞರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ವಿಚಾರಧಾರೆ ಹಂಚಿಕೊಳ್ಳಲಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಸುಂದರೇಶ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಉಪ ವಿಭಾಗಾ ಧಿಕಾರಿ ಶಂಕರ ವಣಕ್ಯಾಳ, ವರ್ತಕರ ಸಂಘದ ಅಧ್ಯಕ್ಷ ಚಂದ್ರಕಾಂತ ಗುಡ್ಡೋಡಗಿ ಹಾಗೂ ಜಿ.ಪಂ.ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.