ADVERTISEMENT

ರೈತರ ಮೇಲಿನ ಹಲ್ಲೆಗೆ ಆಕ್ರೋಶ: ಕರಾಳ ದಿನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 7:12 IST
Last Updated 7 ಜುಲೈ 2017, 7:12 IST

ನಿಡಗುಂದಿ: ಕೂಡಗಿಯ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ 2014ರ ಜುಲೈ 5ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರಿಂದ ಗುಂಡೇಟು ತಿಂದು ಪರಾವಲಂಬಿ ಬದುಕು ಸಾಗಿಸುತ್ತಿರುವ ಮಸೂತಿ ಮತ್ತು ಮುತ್ತಗಿ ಗ್ರಾಮದ ಇಬ್ಬರು ರೈತರಿಗೆ ಸರ್ಕಾರ ತಲಾ ₹ 25 ಲಕ್ಷ ಪರಿಹಾರ ನೀಡಬೇಕೆಂದು ರೈತ ಸಮೂಹ ಒಕ್ಕೊರಲಿನಿಂದ ಆಗ್ರಹಿಸಿತು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಸ್ಥಳೀಯ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಆಯೋಜಿ ಸಲಾಗಿದ್ದ ‘ಕರಾಳ ದಿನಾಚರಣೆ’ ಕಾರ್ಯ ಕ್ರಮದಲ್ಲಿ ಒಕ್ಕೊರಲ ಆಗ್ರಹ ಕೇಳಿಬಂದಿತು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಿಂಗರಾಜ ಆಲೂರ, ಉಪಾಧ್ಯಕ್ಷ ಅಮೀರ ನಂದವಾಡಗಿ ಮಾತನಾಡಿ, ‘ಗೋಲಿಬಾರ್ ವೇಳೆ ಮಸೂತಿಯ ಸದಾಶಿವ ಗಣಾಚಾರಿ, ಮುತ್ತಗಿಯ ಚಂದಪ್ಪ ಸಿಡಿ ಗುಂಡೇಟು ತಿಂದು ಗಾಯಗೊಂಡು ಪರಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಸರ್ಕಾರ ಕೇವಲ $ 1 ಲಕ್ಷ ಪರಿ ಹಾರ ನೀಡಿ ಕೈತೊಳೆದುಕೊಂಡಿದೆ. ಅವರು ದುಡಿಯಲೂ ಆಗದ ಸ್ಥಿತಿಯಲ್ಲಿ ದ್ದಾರೆ.  ಅವರಿಗೆ ₹ 25 ಲಕ್ಷ  ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಕಾಶಿನಾಥ ಪತ್ತಾರ, ನಿಡಗುಂದಿ ಘಟಕದ ಅಧ್ಯಕ್ಷ ತಿರುಪತಿ ಬಂಡಿವಡ್ಡರ, ಕುಮಾರಗೌಡ ಪಾಟೀಲ ಮಾತನಾಡಿ ‘ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಇರುವ ರೈತರ ಸಾಲವನ್ನು ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪಿಕೆಪಿಎಸ್ ಅಧ್ಯಕ್ಷ ಮುರಗೇಶ ಹೆಬ್ಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಅಮೃತ ಯಾದವ, ರೈತ ಸಂಘದ ಬಸವನ ಬಾಗೇವಾಡಿ ತಾಲೂಕು ಘಟ ಕದ ಅಧ್ಯಕ್ಷೆ ವರದೇವಿ ಹನಮಶೆಟ್ಟಿ, ಶಿವಪ್ಪ ಇಂಗಳೇಶ್ವರ, ಸಂಗಪ್ಪ ಕೋಲಾರ, ಮಲ್ಲಯ್ಯ ಮಠಪತಿ, ಮಹಾ ದೇವ ಗೋಡೆಕಾರ, ಅಮರೇಶಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣದ, ಶಿವಪ್ಪ ಪಾಟೀಲ, ಬಸಪ್ಪ ಅಚನೂರ, ಚಂದ್ರಾಮಪ್ಪಗೌಡ ಪರಮಗೊಂಡ, ಕೇಶವ ಪವಾರ ಇದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ನೂರಾರು ರೈತರು ತಮ್ಮ ಹಣೆ ಮತ್ತು ಕೈ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪೊಲೀಸರ ದೌರ್ಜನ್ಯ ಮತ್ತು ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಬಿಗಿ ಬಂದೋಬಸ್ತ್: ಗೊಳಸಂಗಿ, ಮುತ್ತಗಿ ಕ್ರಾಸ್, ಗೊಳಸಂಗಿ ತಾಂಡಾ, ಎನ್‌ಟಿಪಿಸಿಯ 18ನೇ ಕ್ರಾಸ್ ಮತ್ತಿತರ ಕಡೆಗಳಲ್ಲಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.