ADVERTISEMENT

ವಿಟಿಯು ವಿರುದ್ಧ ಬೀದಿಗಿಳಿದ ವಿದ್ಯಾರ್ಥಿ ಸಂಘಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 5:30 IST
Last Updated 2 ಸೆಪ್ಟೆಂಬರ್ 2017, 5:30 IST

ವಿಜಯಪುರ: ಪಠ್ಯಕ್ರಮಗಳ ಸತತ ಬದಲಾವಣೆ, ಅಂಕಪಟ್ಟಿಗಳಲ್ಲಿ ಗೊಂದಲ, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿ, ಶುಕ್ರವಾರ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಎಂಜಿನಿಯರಿಂಗ್ ಕಾಲೇಜು ತರಗತಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿಗಳು ಸಹ ತರಗತಿಗಳಿಂದ ದೂರ ಉಳಿದು ಹೋರಾಟಕ್ಕೆ ಕೈ ಜೋಡಿಸಿ, ಕೆಲ ಕಾಲ ರಸ್ತೆ ತಡೆ ನಡೆಸಿದರು. ಟೈರ್‌ಗಳನ್ನು ಸುಟ್ಟು ವಿಟಿಯು ಅನುಸರಿಸುತ್ತಿರುವ ಗೊಂದಲಮಯ ಕ್ರಮಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಬೈಕ್ ರ್‌್ಯಾಲಿ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮೂಲಕ ವಿಟಿಯು ಕುಲಪತಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷ ಎಚ್.ಟಿ.ಭರತಕುಮಾರ ಮಾತನಾಡಿ ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎರಡು ತಿಂಗಳಿಂದ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ, ಕುಲಪತಿಯಾಗಲಿ, ರಾಜ್ಯ ಸರ್ಕಾರವಾಗಲಿ ಈ ಬಗ್ಗೆ ಸ್ಪಂದಿಸುತ್ತಿಲ್ಲ, ಇದರಿಂದಾಗಿ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿ ಸಮೂಹದ ಬೇಡಿಕೆಯನ್ನು ಆಲಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ ‘2010 ಸ್ಕೀಮ್ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಹಾಗೂ ಕ್ರಿಟಿಕಲ್ ಇಯರ್ ಬ್ಯಾಕ್ ಪದ್ಧತಿಯನ್ನು ಈ ವರ್ಷದ ಮಟ್ಟಿಗೆ ಹಿಂಪಡೆಯಬೇಕು. ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಒಂದೇ ದಿನದಲ್ಲಿ ಎರಡು ಪರೀಕ್ಷೆ ನಿಯೋಜಿಸುವುದು, ಫಲಿತಾಂಶ ವಿಳಂಬ ಮಾಡುವುದು, ಕ್ರಾಷ್ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು 50 ದಿನದ ಅಂತರದಲ್ಲಿ 16ರಿಂದ 20 ವಿಷಯಗಳ ಪರೀಕ್ಷೆ ಬರೆಯುವಂತಾಗಿದೆ.

ಇದರಿಂದ ಭಯದಲ್ಲಿಯೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಿದೆ. ಕೂಡಲೇ ವಿಟಿಯು ಕುಲಪತಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 2010 ಸ್ಕೀಮ್‌ನ್ನು ವಿದ್ಯಾರ್ಥಿಗಳಿಗೆ ಏರ್ ಬ್ಯಾಕ್ ಅಂಡ್ ಕ್ರಿಟಿಕಲ್ ಏರ್ ಬ್ಯಾಕ್ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಬೇಕು. ಪ್ರತಿ ಪರೀಕ್ಷೆಯ ಫಲಿತಾಂಶಗಳನ್ನು ಅಂಕಗಳ ಸಮೇತ ಪ್ರಕಟಿಸಬೇಕು’ ಎಂದು ವಿದ್ಯಾರ್ಥಿಗಳು ಇದೇ ಸಂದರ್ಭ ಹಕ್ಕೊತ್ತಾಯ ಮಂಡಿಸಿದರು.

ಹೋರಾಟ ಸಮಿತಿ ಸಂಚಾಲಕರಾದ ಭರತಕುಮಾರ ಪವಾರ್, ಸಂಗಮೇಶ, ವಿಜಯಲಕ್ಷ್ಮೀ, ಶೋಭಾ ಯರಗುದ್ರಿ, ವಿದ್ಯಾರ್ಥಿಗಳಾದ ಅಮಿತ್, ಹರೀಶ್, ವಾಣಿ ಬಿಜ್ಜೂರ, ಕಾವೇರಿ, ಭಾಗ್ಯ, ಆದಿಬಾ, ಪೂಜಾ, ವಿಶ್ವನಾಥ, ಸಾಗರ, ಅಲಿ, ಅವಿನಾಶ, ವಿನೋದ, ತುಕಾರಾಮ, ಶಿವು, ಪ್ರವೀಣ, ವರ್ಷಾ, ಅಂಬಿಕಾ, ನೇತ್ರಾ,  ಯೋಗೇಶ, ರಾಜೇಶ, ಸಚಿನ್‌, ಅಕ್ಷಯ, ಸುರೇಖಾ, ಕವಿತಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.