ADVERTISEMENT

ವೇತನ ಹೆಚ್ಚಳ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 6:48 IST
Last Updated 18 ಮಾರ್ಚ್ 2017, 6:48 IST

ವಿಜಯಪುರ: ರಾಜ್ಯ ಬಜೆಟ್‌ನಲ್ಲಿ ಬಿಸಿಯೂಟ ನೌಕರರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಸಮಿತಿ ಪದಾಧಿಕಾರಿ ಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ,  ಅಕ್ಷರ ದಾಸೋಹ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿ 15 ವರ್ಷ ಗಳಾಗಿವೆ. ಇಡೀ ದೇಶದಲ್ಲಿ ರಾಜ್ಯವು ಯೋಜನೆಯ ಜಾರಿಯಲ್ಲಿ ಮೊದಲ ಸ್ಥಾನಗಳಿಸಿದೆ. ಮಾತ್ರವಲ್ಲ ಸರ್ಕಾರಿ ಶಾಲೆಗಳ ಪರೀಕ್ಷೆಯ ಫಲಿತಾಂಶವೂ ಸುಧಾರಣೆಯಾಗಿದೆ. ಇಂತಹ ಸಫಲತೆಗೆ ಮುಖ್ಯ ಕಾರಣಗಳಲ್ಲಿ ಬಿಸಿಯೂಟವೂ ಒಂದು. ಇಂತಹ ಬಿಸಿಯೂಟದಲ್ಲಿ ದಿನನಿತ್ಯ 1.19 ಲಕ್ಷ ಮಹಿಳೆಯರು ಸುಮಾರು 63 ಲಕ್ಷ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿದ್ದಾರೆ ಎಂದು ಹೇಳಿದರು.

ಪ್ರತಿದಿನ ಬೆಳಗ್ಗೆ 9-.30 ರಿಂದ ಮಧ್ಯಾಹ್ನ 3-.30 ರ ವರೆಗೆ ಸ್ವಚ್ಛತಾ ಕೆಲಸ,  ಅಡುಗೆ ಮಾಡಿ ಬಡಿಸುವುದು, ನೀರು ತರುವುದು ಸೇರಿದಂತೆ ಶಾಲೆ ಗಳಲ್ಲಿ ನಡೆಯುವ ಎಲ್ಲ ಸಾರ್ವತ್ರಿಕ ಕಾರ್ಯಕ್ರಮಗಳಿಗೆ ಹಾಗೂ ಬೇಸಿಗೆ ರಜೆಯಲ್ಲೂ ಕೂಡಾ ಅಡುಗೆ ಮಾಡ ಬೇಕಿದೆ. ಇಂತಹ ಅಡುಗೆದಾರರನ್ನು ಸರ್ಕಾರ ಸ್ವಲ್ಪವು ಗಮನಹರಿಸದೇ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಕಾಳಮ್ಮ ಬಡಿಗೇರ ಮಾತನಾಡಿ, ಪ್ರಸ್ತುತ ಬೆಲೆ ಏರಿಕೆಯ ದಿನಮಾನದಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗೆ ಸಿಗುತ್ತಿರುವ ಗೌರವಧನ ಏತಕ್ಕೂ ಸಾಲದಾಗಿದೆ. ಕುಟುಂಬ ನಿರ್ವಹಣೆ ಮಾಡಲಾಗದೇ ನರಳುತ್ತಿ ದ್ದಾರೆ. ಇವರಿಗೆ ಕೇವಲ ತಿಂಗಳಿಗೆ ₹ 1900 ರಿಂದ ₹ 2ಸಾವಿರ ಸಂಭಾವನೆ ಮಾತ್ರವಿದೆ. ಈ ಕೂಡಲೇ ವೇತನ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾನ ಕೆಲಸಕ್ಕೆ- ಸಮಾನ ವೇತನ ವನ್ನು ನೀಡಬೇಕು ಎಂದು 2016ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ ಶಿಫಾರಸ್ಸು ಜಾರಿ ಮಾಡಲು ನಿರಾಕರಿಸುತ್ತಿವೆ ಎಂದು ಆರೋಪಿಸಿದರು.

ಸಿಂದಗಿ ತಾಲ್ಲೂಕು ಅಧ್ಯಕ್ಷೆ ವಿಸ್ಮಿಲ್ಲಾ ಇನಾಮದಾರ್, ಅಕ್ಷರ ದಾಸೋಹ ಯೋಜನೆಯ ಹೆಚ್ಚಿನ ನೌಕರರು ನಿವೃತ್ತಿ ಅಂಚಿನಲ್ಲಿರುವುದರಿಂದ ನಿವೃತ್ತಿ ವೇತನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸುರೇಖಾ ವಾಗಮೋರೆ ಮಾತ ನಾಡಿ, ಈಗಾಗಲೇ ಬಜೆಟ್‌ನಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ ನೀಡುವ ನೆಪದಲ್ಲಿ 4 ಜಿಲ್ಲೆಯಲ್ಲಿ ವೀಕೇಂದ್ರಿಕರಣ ಮಾಡಲು ಹೊರಟಿರುವ ಕ್ರಮ ಖಂಡನೀಯ, ಸರ್ಕಾರ ಈ ಕೂಡಲೇ ವೀಕೇಂದ್ರಿಕರಣ ಪ್ರಕ್ರಿಯೆ ನಿಲ್ಲಿಸಬೇಕು, ಇಲ್ಲದ್ದಿದ್ದರೆ ರಾಜ್ಯದ್ಯಂತ ಹೋರಾಟ ನಡೆಸಲಾಗುವುದು ಎಂದು  ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡರಾದ ಭೀಮಷಿ ಕಲಾದಗಿ,  ಸುಮಂಗಲಾ ಶೆಟ್ಟಿ, ಬೋರಮ್ಮ ಮರಡಿ, ಶಾಂತಾ ಹಳ್ಳಿ, ದಾನಮ್ಮ , ಸಕ್ಕುಬಾಯಿ, ವಿಜಯಲಕ್ಷ್ಮಿ, ರೇಣುಕಾ ಸುಣಗಾರ, ಶೈನಾಜ, ಅನುಸೂಯ, ಗುರಬಾಯಿ  ಕಾಳಮ್ಮ ಬಡಿಗೇರ ಮತ್ತಿತರರರು ಪಾಲ್ಗೊಂಡಿದ್ದರು.

**

ಕೇಂದ್ರ ಸರ್ಕಾರವು ಏಳು ವರ್ಷಗಳಿಂದ ಯಾವುದೇ ಸಂಭಾವನೆ ಹೆಚ್ಚಿಸಿರುವುದಿಲ್ಲ.  ಸರ್ಕಾರ ಸಂವಿಧಾನ್ಮಾತಕ ಆಶಯಗಳನ್ನು ಸಂಪೂರ್ಣವಾಗಿ ಮರೆತಿದೆ
ಕಾಳಮ್ಮ ಬಡಿಗೇರ 
ನಾಯಕಿ, ಅಕ್ಷರ ದಾಸೋಹ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.