ADVERTISEMENT

ಶೋಕಸಾಗರದಲ್ಲಿ ಸೈನಿಕನ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 10:07 IST
Last Updated 30 ಅಕ್ಟೋಬರ್ 2014, 10:07 IST
ಬಸವನಬಾಗೇವಾಡಿ ತಾಲ್ಲೂಕಿನ ಬ್ಯಾಕೋಡ ಗ್ರಾಮದಲ್ಲಿ ಮೃತ ಸೈನಿಕ ಶಂಕರಗೌಡ ಬಿರಾದಾರ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು
ಬಸವನಬಾಗೇವಾಡಿ ತಾಲ್ಲೂಕಿನ ಬ್ಯಾಕೋಡ ಗ್ರಾಮದಲ್ಲಿ ಮೃತ ಸೈನಿಕ ಶಂಕರಗೌಡ ಬಿರಾದಾರ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು   

ಬಸವನಬಾಗೇವಾಡಿ: ಹೃದಯಾಘಾತದಿಂದ ನಿಧನ­ರಾದ ಸೈನಿಕ ಶಂಕರಗೌಡ ಬಿರಾದಾರ (46) ಅವರ ಮೃತದೇಹವನ್ನು ತಾಲ್ಲೂಕಿನ ಬ್ಯಾಕೋಡ ಗ್ರಾಮದಲ್ಲಿ ಬುಧವಾರ  ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅರುಣಾಚಲ ಪ್ರದೇಶದಲ್ಲಿ ಮರಾಠಾ ಲೈಟ್‌ ಎನ್‌ಫೆಂಟ್ರಿ ಸೈನ್ಯ ವಿಭಾಗದಲ್ಲಿ ಸುಭೇದಾರ­ರಾಗಿ  ಸೇವೆ ಸಲ್ಲಿಸುತ್ತಿದ್ದ ಶಂಕರಗೌಡ ಬಿರಾ­ದಾರ ಅವರು ಇದೇ 26ರಂದು ಅರುಣಾಚಲ ಪ್ರದೇಶದಲ್ಲಿ ಹೃದಯಾಘಾತ­ದಿಂದ ನಿಧನ­ರಾಗಿದ್ದರು. ಕಳೆದ 27 ವರ್ಷಗಳಿಂದ ಸೈನಿಕ­ರಾಗಿ ಸೇವೆ ಸಲ್ಲಿಸುತ್ತಿದ್ದ  ಅವರ ಪಾರ್ಥಿವ ಶರೀರವನ್ನು ಮುಂಬೈ, ಪುಣೆ ಮಾರ್ಗವಾಗಿ ಬುಧವಾರ ಬೆಳಿಗ್ಗೆ ಬ್ಯಾಕೋಡ ಗ್ರಾಮಕ್ಕೆ ತರಲಾಯಿತು.

ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.  ಗ್ರಾಮಸ್ಥರು ಮೃತದೇಹವನ್ನು ಗೌರವಪೂರ್ವಕವಾಗಿ ಬರ­ಮಾಡಿ­­ಕೊಂಡರು. ತಹ ಶೀಲ್ದಾರ್‌ ಎಂ.ಎನ್.­­­ ಚೋರಗಸ್ತಿ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತದ ಪರವಾಗಿ  ಸರ್ಕಾರಿ ಗೌರವ ಸಲ್ಲಿಸಲಾಯಿತು.

ಕೆಲ ಕಾಲ ಸಾರ್ವಜನಿಕ ನಮನಕಾಗಿ ಇಡಲಾಗಿತ್ತು. ಪಾರ್ಥಿವ ಶರೀರದೊಂದಿಗೆ ಆಗಮಿಸಿದ್ದ 25 ಸೈನಿಕರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ನಂತರ ಗ್ರಾಮ ಪಂಚಾಯ್ತಿ ಸಮೀಪ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ಮೃತ ಸೈನಿಕನ ಸಂಬಂಧಿಕರು, ಪಿಎಸ್‌ಐ ಎಂ.ಎನ್‌.ಸಿಂಧೂರ, ತಾ.ಪಂ ಅಧಿಕಾರಿ ಎಂ.ಬಿ.ಜನವಾಡ, ಗ್ರಾ.ಪಂ ಅಧ್ಯಕ್ಷೆ ರಾಜಬೀ ಮುಜಾವರ, ರಮಜಾನ ಮುಜಾವರ, ಸಂಗನಗೌಡ ಬಿರಾದಾರ, ಎಂ.ಆರ್‌.ಬಳಬಟ್ಟಿ, ಶಿವಣ್ಣ ಹೇರೂರ, ಸುಭೇದಾರರಾದ ರಾಮಕೃಷ್ಣ ಮೇಹ್ರಾ, ಮೋಹನಶಾಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.