ADVERTISEMENT

‘ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:49 IST
Last Updated 19 ಜನವರಿ 2017, 5:49 IST
‘ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ’
‘ಸಂಚಾರ ನಿಯಮ ಪಾಲಿಸಿ, ಅಪಘಾತ ತಪ್ಪಿಸಿ’   

ಬಸವನಬಾಗೇವಾಡಿ: ವಾಹನ ಚಲಾಯಿಸುವಾಗ ಅವಶ್ಯಕ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಅಗತ್ಯ ದಾಖಲೆಗಳನ್ನು ಹೊಂದಬೇಕು ಎಂದು ಸಿಪಿಐ ಮಹಾದೇವ ಶಿರಹಟ್ಟಿ ಹೇಳಿದರು. ಸ್ಥಳೀಯ ಬಸ್ ಘಟಕದಲ್ಲಿ  ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜನರಲ್ಲಿ ಪೊಲೀಸ್ ಇಲಾಖೆ ವಿವಿಧ ಹಂತದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜನರು ಜೀವದ ರಕ್ಷಣೆಗೆ ಮುಂದಾಗದೇ ಉದಾಸೀನತೆ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಪ್ರತಿಯೊಬ್ಬರ ಜೀವನ ಅಮೂಲ್ಯವಾದುದು. ವಾಹನ ಚಲಾಯಿಸುವಾಗ ನಿಷ್ಕಾಳಜಿಯಿಂದ ನಿಯಮ ಉಲ್ಲಂಘಿಸಿದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳೇ ಹೆಚ್ಚು. ಪ್ರತಿಯೊಬ್ಬರೂ ಸಂಚಾರಿ ನಿಯಮ್ನು ಪಾಲಿಸಬೇಕು ಎಂದು ಹೇಳಿದರು.

ವಕೀಲ ಮಲ್ಲಿಕಾರ್ಜುನ ದೇವರಮನಿ ಮಾತನಾಡಿ ಸಾರಿಗೆ ಸಂಸ್ಥೆಯ ವಾಹನ ಚಾಲಕರು ಮಾನವೀಯ ಮೌಲ್ಯಗಳೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಅದರಿಂದ ಸಂಸ್ಥೆಯ ಕೀರ್ತಿ ಹೆಚ್ಚುತ್ತದೆ. ಅಲ್ಲದೇ ಕುಟುಂಬ ದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಅಪಘಾತರಹಿತ ವಾತಾವರಣ ನಿರ್ಮಿಸಲು ಅನೇಕ ನಿಯಮಗಳು ಜಾರಿಯಲ್ಲಿವೆ. ಅವುಗಳನ್ನು ಪಾಲನೆ ಮಾಡುವ ಮೂಲಕ ಅಪಘಾತರಹಿತ ವಾತಾವರಣ ನಿರ್ಮಾಣ ಮಾಡಬೇಕು. ಚಾಲಕರು ಯಾವುದೇ ಸಂದರ್ಭದಲ್ಲಿ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳದೆ ವಾಹನ ಚಾಲನೆ ಮಾಡಬೇಕು ಎಂದು ಹೇಳಿದರು.

ವಕೀಲ ಎನ್.ಎಸ್.ಪಾಟೀಲ, ಬಸ್‌ ಡಿಪೋ ವ್ಯವಸ್ಥಾಪಕ ಎಂ.ಎಸ್.ಹಿರೇಮಠ ಮಾತನಾಡಿದರು, ಭೀಮು ಗುಳೇದ ಸ್ವಾಗತಿಸಿದರು, ಎ.ಜಿ.ಕೋತ್ವಾಲ ನಿರೂಪಿಸಿದರು, ಗುರು ಪತ್ತಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.