ADVERTISEMENT

ಹೊಣೆ ಹೊರಲು ಮುಖಂಡರ ಹಿಂದೇಟು?

ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಮನವೊಲಿಕೆಗೆ ಮುಂದಾದ ಸಂಗರಾಜ ದೇಸಾಯಿ

ಡಿ.ಬಿ, ನಾಗರಾಜ
Published 23 ಏಪ್ರಿಲ್ 2018, 13:27 IST
Last Updated 23 ಏಪ್ರಿಲ್ 2018, 13:27 IST

ವಿಜಯಪುರ: ಮತದಾನಕ್ಕೆ 19 ದಿನವಷ್ಟೇ ಬಾಕಿ ಉಳಿದಿದೆ. ಬಹಿರಂಗ ಪ್ರಚಾರಕ್ಕೆ ಹದಿನೇಳು ದಿನ ಬಾಕಿಯಿವೆ. ಬಿಜೆಪಿ ಜಿಲ್ಲಾ ಘಟಕದಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ಇಂತಹ ಹೊತ್ತಿನಲ್ಲಿ ಕಮಲ ಪಾಳೆಯದ ಜಿಲ್ಲೆಯ ಹೊಣೆಗಾರಿಕೆ ಹೊತ್ತಿದ್ದ, ಬಿಎಸ್‌ವೈ ಬಂಟ ವಿಠ್ಠಲ ಕಟಕದೊಂಡ ಪಕ್ಷ ತೊರೆದು, ‘ಕೈ’ ಹಿಡಿದಿದ್ದು, ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಜಿಲ್ಲಾ ಘಟಕಕ್ಕೆ ನೂತನ ಸಾರಥಿ ಯನ್ನು ನೇಮಿಸುವ, ಇಲ್ಲವೇ ಹಾಲಿ ಪದಾಧಿಕಾರಿಗಳ ತಂಡದ ಸದಸ್ಯ ರೊಬ್ಬರಿಗೆ ಜಿಲ್ಲೆಯ ಉಸ್ತುವಾರಿ ನೀಡುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅನಿವಾರ್ಯ ಇದೀಗ ಬಿಜೆಪಿ ರಾಜ್ಯ ವರಿಷ್ಠರಿಗೆ ಎದುರಾಗಿದೆ.

ಸಂಕಷ್ಟದ ಕಾಲದಲ್ಲಿ, ಚುನಾವಣೆ ಹೊತ್ತಿನಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ, ಸಂಭಾಳಿಸುವ ಛಾತಿಯುಳ್ಳ, ಸಮರ್ಥರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ.

ADVERTISEMENT

ತಮ್ಮ ಒಡನಾಡಿ ಕಟಕದೊಂಡ ರಾಜೀನಾಮೆಯಿಂದ ಕಂಗಾಲಾಗಿರುವ ಯಡಿಯೂರಪ್ಪ, ಶನಿವಾರ, ಭಾನುವಾರ ಎರಡೂ ದಿನವೂ ತಮ್ಮ ಆಪ್ತರ ಮೂಲಕ ನೂತನ ಸಾರಥಿ ನೇಮಕಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಹಂತದಲ್ಲಿ ಪಕ್ಷದ ಜವಾಬ್ದಾರಿ ಹೊರಲು ಬಹುತೇಕರು ಹಿಂದೇಟು ಹಾಕಿದ್ದಾರೆ. ಆರು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ತಾರಕಕ್ಕೇರಿದೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಅಖಾಡಕ್ಕಿಳಿಯುವುದೇ ಇಲ್ಲ ಎಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪ್ರಕಟಿಸಿದ್ದಾರೆ.

ಇಂಡಿಯಿಂದ ರವಿಕಾಂತ ಪಾಟೀಲ ಬಂಡಾಯ ಬಾವುಟ ಹಾರಿಸಿದರೆ, ದೇವರಹಿಪ್ಪರಗಿಯಿಂದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಮುದ್ದೇಬಿಹಾಳದಿಂದ ಮಂಗಳಾದೇವಿ ಬಿರಾದಾರ ಬಿಜೆಪಿ ತೊರೆದು ಜೆಡಿಎಸ್‌ ಅಭ್ಯರ್ಥಿಗಳಾಗಿದ್ದಾರೆ.

‘ಬಸವನಬಾಗೇವಾಡಿಯಲ್ಲಿ ಬೆಳ್ಳುಬ್ಬಿ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಆಗ್ರಹಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಜಿಲ್ಲಾ ಘಟಕದ ಚುಕ್ಕಾಣಿ ಹಿಡಿಯಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಮೇ 16ರ ನಂತರ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ ಲಾಬಿ ನಡೆಯಬಹುದು. ಇದೀಗ ಹಂಗಾಮಿ ಅಧ್ಯಕ್ಷರ ನೇಮಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ’ ಎಂದು ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿಗೆ ರಾಜೀನಾಮೆ?: ‘ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ನಾಲ್ವರು ಜಿಲ್ಲಾ ಪಂಚಾಯ್ತಿ ಸದಸ್ಯರು, ಆರು ತಾಲ್ಲೂಕು ಪಂಚಾಯ್ತಿ ಸದಸ್ಯರು, ಒಂಭತ್ತು ಮಂದಿ ಬಾಗೇವಾಡಿ ಪುರಸಭೆ ಸದಸ್ಯರು, ಎಂಟು ಮಂದಿ ಕೊಲ್ಹಾರ ಪಟ್ಟಣ ಪಂಚಾಯ್ತಿ ಸದಸ್ಯರು ಸೇರಿದಂತೆ ಒಟ್ಟು 27 ಮಂದಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರದೊಳಗೆ ವರಿಷ್ಠರು ನಿರ್ಧಾರ ಬದಲಿಸದಿದ್ದರೆ, ಬೆಳ್ಳುಬ್ಬಿ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಕಣಕ್ಕಿಳಿಸುವುದು ಖಚಿತ. ಈ ಸಂಬಂಧ ಅಭಿಮಾನಿಗಳು, ಬೆಂಬಲಿಗರು ಇನ್ನೂ ಎರಡ್ಮೂರು ಸರಣಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಿದ್ದಾರೆ’ ಎಂದು ಬಸವನಬಾಗೇವಾಡಿ ಪುರಸಭೆ ಸದಸ್ಯ ನೀಲಪ್ಪ ನಾಯ್ಕ್‌ ಹೇಳಿದರು.

ವಲಸಿಗರಿಗೆ ಮಣೆ

ಜೆಡಿಎಸ್‌, ಕಾಂಗ್ರೆಸ್‌ ತಲಾ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿವೆ. ಇದರಲ್ಲಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ವಲಸಿಗರೇ ಇದ್ದಾರೆ.ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಕಟಕದೊಂಡ ಶನಿವಾರವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಬಿಜೆಪಿ ಟಿಕೆಟ್‌ ದೊರೆಯದಿದ್ದುರಿಂದ ಅಸಮಾಧಾನಿತರಾಗಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದ, ರಾಜುಗೌಡ ಪಾಟೀಲ ಕುದರಿಸಾಲವಾಡಗಿಗೆ ದೇವರಹಿಪ್ಪರಗಿ, ಮಂಗಳಾದೇವಿ ಬಿರಾದಾರ ಅವರಿಗೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಜೆಡಿಎಸ್‌ ಘೋಷಿಸಿದೆ.

ಕುರುಬ ಸಮುದಾಯದ ಸ್ಪರ್ಧಾಕಾಂಕ್ಷಿಗಳು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ, ಕಾಂಗ್ರೆಸ್‌ ತನ್ನ ಹುರಿಯಳನ್ನಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ, ಕುರುಬ ಸಮಾಜ, ಪಕ್ಷದ ಹಿರಿಯ ಮುಖಂಡ ಮಲ್ಲಣ್ಣ ಸಾಲಿ ಅವರನ್ನು ಕಣಕ್ಕಿಳಿಸಿದೆ.

ಜೆಡಿಎಸ್‌ ನಡೆ ನಿಗೂಢ?

ನಾಮಪತ್ರ ಸಲ್ಲಿಕೆಗೆ ಎರಡು ದಿನವಷ್ಟೇ ಬಾಕಿ ಉಳಿದಿದೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನು ಇದೂವರೆಗೂ ಪ್ರಕಟಿಸದಿರುವುದು ನಗರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಸ್ಥಳೀಯ ಕೆಲವು ಮುಖಂಡರು ಮುಸ್ಲಿಂ ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕು ಎಂಬ ಒತ್ತಡವನ್ನು ಕುಮಾರಸ್ವಾಮಿ ಮೇಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯದಲ್ಲಿ ಎಚ್‌ಡಿಕೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದ್ದು, ತಮ್ಮ ಪರಮಾಪ್ತರ ಒತ್ತಡಕ್ಕೆ ಮಣಿಯುತ್ತಾರೋ ? ಇಲ್ಲವೇ ತಮಗೆ ಕೈಕೊಟ್ಟವರಿಗೆ ಪಾಠ ಕಲಿಸಲು ಮುಂದಾಗುವ ನಡೆ ಅನುಸರಿಸುತ್ತಾರೋ ಎಂಬುದು ನಿಗೂಢವಾಗಿದೆ.

**

ಬೆಳ್ಳುಬ್ಬಿ ನನ್ನ ತಂದೆ ಸಮಾನ. ಟಿಕೆಟ್‌ ತಪ್ಪಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಅವರ ಮನವೊಲಿಸುವೆ. ಅವರ ನೇತೃತ್ವದಲ್ಲೇ ನಾಮಪತ್ರ ಸಲ್ಲಿಸುವೆ
ಸಂಗರಾಜ ದೇಸಾಯಿ, ಬಸವನಬಾಗೇವಾಡಿ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.