ADVERTISEMENT

‘ವಿವಿಧತೆಯಲ್ಲಿ ಏಕತೆ ಹೇಳಲು ಒಬಾಮ ಬೇಕಿಲ್ಲ’

ಮಲ್ಲಿಕಾರ್ಜುನ ಖರ್ಗೆ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 6:02 IST
Last Updated 29 ಜನವರಿ 2015, 6:02 IST
ಚಡಚಣ ಸಮೀಪದ ದೇವರ ನಿಂಬರಗಿ ಗ್ರಾಮದಲ್ಲಿ ಬುಧವಾರ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಲೋಕಸಭಾ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ರಾಜೂ ಆಲಗೂರ, ಮಹಾದೇವ ಸಾಹುಕಾರ ಬೈರಗೊಂಡ, ದಶರಥ ಸಿಂಗೆ ಮುಂತಾದವರು ಚಿತ್ರದಲ್ಲಿದ್ದಾರೆ
ಚಡಚಣ ಸಮೀಪದ ದೇವರ ನಿಂಬರಗಿ ಗ್ರಾಮದಲ್ಲಿ ಬುಧವಾರ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಲೋಕಸಭಾ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ರಾಜೂ ಆಲಗೂರ, ಮಹಾದೇವ ಸಾಹುಕಾರ ಬೈರಗೊಂಡ, ದಶರಥ ಸಿಂಗೆ ಮುಂತಾದವರು ಚಿತ್ರದಲ್ಲಿದ್ದಾರೆ   

ಚಡಚಣ: ಬುದ್ಧ ಬಸವಣ್ಣನವರು ಮಾನವ ಕುಲದ ಅಭಿವೃದ್ಧಿಗೆ ನೀಡಿದ ತತ್ವಾದರ್ಶಗಳು ನಮಗೆ ದಾರಿ ದೀಪವಾಗಿವೆ ಎಂದು ಲೋಕಸಭಾ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸಮೀಪದ ದೇವರ ನಿಂಬರಗಿ ಗ್ರಾಮದಲ್ಲಿ ಬುಧವಾರ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಯ ನೂತನ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಧರ್ಮದ ಅಶಾಂತಿ ಮೂಡಿಸುವದು ಬೇಡ. ಪ್ರಸ್ತುತವಾಗಿ ನಾವು ಜಾತಿ, ಧರ್ಮ ಆಧಾರದ ಮೇಲೆ ದೇಶ ಒಡೆಯುವುದು    ಅಪಾಯಕಾರಿ. ದೇಶಕ್ಕಾಗಿ ನಾವೆಲ್ಲ ಒಂದಾಗಬೇಕು. ಇಲ್ಲಿ ಎಲ್ಲ ಧರ್ಮೀಯರಿಗೂ ಸಮಾನ ಅವಕಾಶ ಹಾಗೂ ತಮ್ಮ ಆಸಕ್ತಿಗೆ ಅನುಗುಣವಾಗಿ ಧರ್ಮದ ಆಚರಣೆ ಮಾಡುವದು ಸಂವಿಧಾನಿಕ ಹಕ್ಕಾಗಿದೆ.

ವಿವಿಧತೆಯಲ್ಲಿ ಏಕತೆ ಇರುವುದು ನಮ್ಮ ದೇಶದಲ್ಲಿ ಮಾತ್ರ. ಇದನ್ನು ಹೇಳಲು ನಮ್ಮ ದೇಶಕ್ಕೆ ಒಬಾಮ ಬರಬೇಕಾಗಿಲ್ಲ. ಇದನ್ನು ಸುಮಾರು 2,675 ವರ್ಷಗಳ ಹಿಂದೆಯೇ ಬುಧ್ಧ ಹೇಳಿದ್ದಾನೆ. ಆದ್ದರಿಂದ ನಮ್ಮ ನಮ್ಮಲ್ಲಿ ಭೇದಭಾವ ತೊರೆದು ಬುದ್ಧ ಬಸವಣ್ಣರು ಹೇಳಿದ ಮಾರ್ಗದಲ್ಲಿ ನಾವು  ಬದುಕಿ, ಬಲಿಷ್ಠ ಸಮಾಜ, ನಾಡನ್ನು ಕಟ್ಟಬೇಕು. 25 ವರ್ಷಗಳ  ಹಿಂದೆ ಆರಂಭಗೊಂಡ ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ’ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಗಠಾಣ ಶಾಸಕ ರಾಜೂ ಆಲಗೂರ, ‘ಚಡಚಣ ಭಾಗದ ನೀರಾವರಿ ಯೋಜನೆಗೆ ನಿರಾವರಿ ಸಚಿವರು ₹ 160 ಕೋಟಿ ಹಣ ಮಂಜೂರಾಗಿದ್ದು, ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಗೂ ₹ 1 ಸಾವಿರ ಕೋಟಿ ಹಣ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಮುಳವಾಡ, ಚಿಮ್ಮಲಗಿ ಏತ ನಿರಾವರಿ ಯೋಜನೆಗಳ ಕಾಮಗಾರಿ ಭರದಿಂದ ಸಾಗಿವೆ. ಇದರಿಂದ 8 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ನಾಗಠಾಣ ಮತಕ್ಷೇತ್ರದ ಎಲ್ಲ ನಿರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರೀಯಾಯೋಜನೆ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ಹೊಂದಲಿದೆ.

ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ವಿಜಯ­ಪುರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂಬ ಹಣೆ  ಪಟ್ಟಿಯನ್ನು ತೊಡೆದು ಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು. 

ಶಾಸಕರಾದ ಯಶವಂತರಾಯಗೌಡ ಪಾಟೀಲ, ಮಕಬುಲ್ ಬಾಗವಾನ, ಜಿ.ಪಂ. ಅಧ್ಯಕ್ಷ ಉಮೇಶ ಕೋಳಕೂರ, ಭಗವಾನ್‌ ಬುದ್ಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಶರಥ ಬನಸೋಡೆ, ಶಿಕ್ಷಣ ಸಂಸ್ಥೆಗೆ ಭೂದಾನ ಮಾಡಿದ ರವೀಂದ್ರ ಗುಮಾಸ್ತೆ, ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ, ಮಾಜಿ ಶಾಸಕ ಆರ್.ಆರ್.ಕಲ್ಲೂರ, ಬಿ.ಆರ್.ಪಾಟೀಲ ಅಂಜುಟಗಿ, ಕೆ.ಬಸಣ್ಣ, ಬಿ.ಎಂ.ಕೋರೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣಪ್ಪ ಸುಣಗಾರ, ಚಡಚಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿಗೌಡ ಪಾಟೀಲ, ತಾ.ಪಂ.ಸದಸ್ಯ ಭೀಮುಗೌಡ ಬಿರಾದಾರ, ಚಂದ್ರಕಾಂತ ಕೋಳಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.