ADVERTISEMENT

‘2016ರ ಜನವರಿಗೆ ಕೂಡಗಿ ವಿದ್ಯುತ್‌’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 10:00 IST
Last Updated 30 ಅಕ್ಟೋಬರ್ 2014, 10:00 IST

ಬೆಂಗಳೂರು: ಕೂಡಗಿಯ 800 ಮೆಗಾವಾಟ್‌ ಸಾಮರ್ಥ್ಯದ ಉಷ್ಣವಿದ್ಯುತ್‌ ಸ್ಥಾವರದ ಮೊದಲ ಘಟಕ 2016ರ ಜನವರಿಯಿಂದ ಕಾರ್ಯಾರಂಭ ಮಾಡಲಿದೆ ಎಂದು ರಾಷ್ಟ್ರೀಯ ಶಾಖೋತ್ಪನ್ನ ನಿಗಮ (ಎನ್‌ಟಿಪಿಸಿ) ದಕ್ಷಿಣ ವಲಯ ಮುಖ್ಯಸ್ಥ ಆರ್‌. ವೆಂಕಟೇಶ್ವರನ್‌ ಮಾಹಿತಿ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದ ಅವರು, ಉಳಿದ ಎರಡು ಘಟಕಗಳು ಮೊದಲ ಘಟಕ ಆರಂಭವಾದ ಆರು ತಿಂಗಳ ಅಂತ­ರ­­ದಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು. ಮೊದಲ ಹಂತದಲ್ಲಿ  ಉತ್ಪಾದನೆ­ಯಾಗುವ 2400 ಮೆಗಾವಾಟ್‌ ವಿದ್ಯುತ್‌ನಲ್ಲಿ ಶೇ 50ರಷ್ಟು ಕರ್ನಾಟಕಕ್ಕೆ ಪೂರೈಕೆಯಾಗಲಿದೆ. ಇದರಿ­ಂದ ರಾಜ್ಯದ ವಿದ್ಯುತ್‌ ಕೊರತೆ ನೀಗಲಿದೆ ಎಂದರು.

ಕೂಡಗಿ ಘಟಕವು ಮೊದಲ  ಸೂಪರ್‌ ಕ್ರಿಟಿಕಲ್‌ ತಂತ್ರಜ್ಞಾನ (ಹೆಚ್ಚು ಒತ್ತಡ ಮತ್ತು ಹೆಚ್ಚು ಉಷ್ಣತೆ) ಒಳಗೊಂಡ ಘಟಕವಾಗಿದೆ. ಇದಕ್ಕೆ ಪ್ರತಿ ವರ್ಷ 1.3ಕೋಟಿ ಟನ್‌ ಕಲ್ಲಿದ್ದಲು ಅವಶ್ಯವಾಗಿದ್ದು, ಜಾರ್ಖಂಡ್‌ ಮತ್ತು ಛತ್ತೀಸ್‌ಗಡದಿಂದ ಪೂರೈಕೆಯಾಗುತ್ತಿದೆ. ಅಗತ್ಯವಿರುವ 5.2 ಟಿಎಂಸಿ ನೀರನ್ನು ಆಲಮಟ್ಟಿ ಅಣೆಕಟ್ಟೆಯಿಂದ ನೀಡಲು ರಾಜ್ಯ ಸರ್ಕಾರ ಒಪ್ಪಿದೆ ಎಂದು ಮಾಹಿತಿ ನೀಡಿದರು.

ಕೂಡಗಿ ಉಷ್ಣವಿದ್ಯುತ್‌  ಸ್ಥಾವರದ ವ್ಯವಸ್ಥಾಪಕಿ  ಎ. ಸತ್ಯಭಾಮಾ ಮಾತನಾಡಿ, ಸ್ಥಾವರ ಸ್ಥಾಪನೆಗೆ ವಶಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಕೆಐಎಡಿಬಿಯು ₨201.34 ಕೋಟಿ (2014, ಸೆಪ್ಟೆಂಬರ್‌ವರೆಗೆ) ಪರಿಹಾರ ನೀಡಿದೆ. ಇದರ ಜೊತೆಗೆ ಪ್ರತಿ ಎಕರೆಗೆ ₨2ಲಕ್ಷ ದಂತೆ ವಿಶೇಷ ಅನುದಾನವನ್ನು ಎನ್‌ಟಿಪಿಸಿ ನೀಡಿದೆ ಎಂದರು.

ಆತಂಕ ಬೇಡ: ಹಾರುಬೂದಿಯನ್ನು ತಡೆ­ಯಲು ಶೇ 99.97ರಷ್ಟು ಸಾಮರ್ಥ್ಯದ  ಆಧುನಿಕ ನಿಯಂತ್ರಣದ ವ್ಯವಸ್ಥೆ ಅಳವಡಿಸಲಾಗಿದೆ. 275 ಮೀಟರ್‌ ಎತ್ತರದ ಚಿಮಿಣಿ ನಿರ್ಮಿಸಲಾಗಿದೆ. ಹಾರುಬೂದಿಯನ್ನು ಸಿಮೆಂಟ್‌ ತಯಾರಿಕೆ ಮತ್ತು ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು. ನೀರಿನ ಪುನರ್‌ಬಳಕೆ ಮಾಡುವುದರಿಂದ ಮಾಲಿನ್ಯ ಕಡಿಮೆಯಾಗಲಿದೆ. ಜನ ಆತಂಕ ಪಡುವ ಅಗತ್ಯವಿಲ್ಲ. ಸ್ಥಳೀಯರಿಗೆ ಮನವರಿಕೆ ಮಾಡಲು ಬೇರೆ ಸ್ಥಾವರಗಳಿಗೆ ಭೇಟಿ, ಸಾಕ್ಷ್ಯಚಿತ್ರ ಪ್ರದರ್ಶನ,  ಕರಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಸತ್ಯಭಾಮಾ ಸ್ಪಷ್ಟಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.