ADVERTISEMENT

210 ಆಟದ ಮೈದಾನ ಮಂಜೂರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 4:44 IST
Last Updated 11 ಸೆಪ್ಟೆಂಬರ್ 2017, 4:44 IST

ವಿಜಯಪುರ: ಜಿಲ್ಲಾ ಪಂಚಾಯ್ತಿ ವತಿಯಿಂದ 210 ಶಾಲೆಗಳಿಗೆ ಆಟದ ಮೈದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ನಡೆದ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈಗಾಗಲೇ ಆವರಣ ಗೋಡೆಯಿಲ್ಲದ 840 ಶಾಲೆಗಳನ್ನು ಗುರುತಿಸಿ, 300 ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣಕ್ಕೆ ಅನುಮತಿ ನೀಡ ಲಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿ ಯಲ್ಲಿದೆ. ಈ ಶಾಲೆಗಳ ಆವರಣಗಳಲ್ಲಿ ಸಸಿ ನೆಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಆವರಣ ಗೋಡೆ ನಿರ್ಮಾಣ ಸೇರಿದಂತೆ ಶಾಲೆಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಪಂಚಾಯ್ತಿ ಸಂಪೂರ್ಣ ಸಹಕಾರ ನೀಡುತ್ತದೆ. ಕೆಲ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯವೂ ಸಹ ಪ್ರಗತಿಯಲ್ಲಿದೆ.

ADVERTISEMENT

14ನೇ ಹಣಕಾಸು ಆಯೋಗದಡಿ ಪ್ರತಿ ಗ್ರಾಮ ಪಂಚಾಯ್ತಿ ಒಂದೊಂದು ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಅದರಂತೆ 210 ಗ್ರಾಮ ಪಂಚಾಯ್ತಿ ಗಳಿಗೆ ತಲಾ ಒಂದು ಶಾಲೆಯಂತೆ 210 ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಕೆಲ ತಾಲ್ಲೂಕುಗಳಲ್ಲಿ ಪಿಡಿಓಗಳು ಈಗಾಗಲೇ ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಶಾಲೆಗಳನ್ನು ಗುರುತಿಸಿದ್ದಾರೆ. ಬಿಇಒ, ಬಿಆರ್‌ಪಿ, ಸಿಆರ್‌ಪಿಗಳು ತಾವು ಗುರುತಿಸಿದ ಶಾಲೆ ಪಟ್ಟಿಯಿಂದ ಬಿಟ್ಟು ಹೋಗಿದ್ದರೆ ಕೂಡಲೇ ಪಿಡಿಒಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.

ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ಸ್ಥಾಪಿಸಿ, ಉನ್ನತ ಅಧಿಕಾರದಲ್ಲಿರುವ ಹಳೆಯ ವಿದ್ಯಾರ್ಥಿಗಳಿಂದ ಸಾಧ್ಯವಾದ ದೇಣಿಗೆ ಪಡೆದು ಅಗತ್ಯ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ’ ಸಿಇಒ ಇದೇ ಸಂದರ್ಭ ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಮಾತನಾಡಿ ‘ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಲಾ ಅಭಿವೃದ್ಧಿಗೆ ಕೈಗೊಂಡ ವಿಶೇಷ ಕ್ರಮಗಳು, ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಶೌಚಾಲಯದ ಕೊರತೆ ಕಾರಣ ಬಹಳಷ್ಟು ವಿದ್ಯಾರ್ಥಿನಿಯರು ಶಾಲೆಗೆ ಬರುವುದಿಲ್ಲ. ಪ್ರತಿ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಬೇರೆ ರಾಜ್ಯದ ಶಾಲೆಗಳಂತೆ ನಮ್ಮ ಜಿಲ್ಲೆಯ ಶಾಲೆಗಳನ್ನು ಮಾದರಿಯನ್ನಾಗಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದ ಟಿ.ಬೊಂಗಾಳೆ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಬ್ಲಾಕ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಮಟ್ಟದ ಅಧಿಕಾರಿಗಳು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.