ADVERTISEMENT

ಅಂತರ್ಜಲ ಸಮೃದ್ಧ; ಕುಡಿಯಲು ಅಶುದ್ಧ

ಸರ್ಕಾರಕ್ಕೆ ಹಿಂದಿರುಗಿದ ₹47 ಕೋಟಿ ಅನುದಾನ; ಹಳ್ಳಿಗಳಲ್ಲಿ ಹನಿ ನೀರಿಗೂ ತಪ್ಪದ ಬವಣೆ

ಮಲ್ಲೇಶ್ ನಾಯಕನಹಟ್ಟಿ
Published 22 ಮಾರ್ಚ್ 2018, 13:39 IST
Last Updated 22 ಮಾರ್ಚ್ 2018, 13:39 IST
ಯಾದಗಿರಿ ಸಮೀಪ ಭೀಮಾ ನದಿದಂಡೆಯಲ್ಲಿರುವ ಕಂಚಗಾರಹಳ್ಳಿಯಲ್ಲಿ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು
ಯಾದಗಿರಿ ಸಮೀಪ ಭೀಮಾ ನದಿದಂಡೆಯಲ್ಲಿರುವ ಕಂಚಗಾರಹಳ್ಳಿಯಲ್ಲಿ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು   

ಯಾದಗಿರಿ: ಭೀಮಾ ನದಿಯ ದಂಡೆಗೆ ಹೊಂದಿಕೊಂಡಿರುವ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈ ಸಲ ಬೇಸಿಗೆ ಆರಂಭದಲ್ಲೇ ಕುಡಿಯುವ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಇದರಿಂದಾಗಿ ಜಿಲ್ಲಾಡಳಿತ ಭವನದ ಎದುರು ನಿತ್ಯ ಖಾಲಿಕೊಡಗಳನ್ನು ಪ್ರದರ್ಶಿಸುವ ಮೂಲಕ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯಲ್ಲಿನ ಹಳ್ಳಿಗಳು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ. ಅಂತರ್ಜಲ ಸಮೃದ್ಧವಾಗಿದ್ದರೂ ಕುಡಿಯುವ ಶುದ್ಧ ನೀರು ಮಾತ್ರ ಜನರಿಗೆ ಮರೀಚಿಕೆಯಾಗಿದೆ. ಸರ್ಕಾರ ಮಂಜೂರು ಮಾಡಿರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ವೈಫಲ್ಯ
ಇಂದಿನ ನೀರಿನ ಸಮಸ್ಯೆಗಳಿಗೆ ಕಾರಣವಾಗಿದೆ.

‘ಸನ್ನತ್ತಿ ಬ್ಯಾರೇಜ್‌ನಿಂದ ಹಳ್ಳಿಗಳಿಗೆ ನೀರು ಪೂರೈಸುವ ಉದ್ದೇಶ ಹೊಂದಿರುವ ‘ಯರಗೋಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಕಾಮಗಾರಿ ಆರಂಭಗೊಂಡು ಏಳು ವರ್ಷಗಳೇ ಕಳೆದರೂ ಇದುವರೆಗೂ ಯರಗೋಳ ಸುತ್ತಮುತ್ತಲಿನ ಒಂದು ಹಳ್ಳಿಗೂ ಹನಿ ನೀರು ಪೂರೈಕೆಯಾಗಿಲ್ಲ. ₹7 ಕೋಟಿ ವೆಚ್ಚದ ಕಾಮಗಾರಿ ಕುಂಟುತ್ತಾ ಸಾಗಿದೆ. ಯೋಜನೆ ವೈಫಲ್ಯ ಕುರಿತು ಜಿಲ್ಲಾಡಳಿತ ಯಾವುದೇ ಕಠಿಣ ಕ್ರಮ ಅನುಸರಿಸಿಲ್ಲ. 2016–17ನೇ ಆರ್ಥಿಕ ವರ್ಷದಲ್ಲಿ ಸರ್ಕಾರ ಕುಡಿಯುವ ನೀರಿನ ಕಾಮಗಾರಿಗಳ ಬಳಕೆಗೆ ನೀಡಿದ್ದ ಅನುದಾನದಲ್ಲಿ ₹47 ಕೋಟಿಯಷ್ಟು ಅನುದಾನ ಸರ್ಕಾರಕ್ಕೆ ಹಿಂದಿರುಗಿದೆ’ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಕಿಶನ್ ರಾಠೋಡ ನೀರು ಪೂರೈಕೆ ಬಗ್ಗೆ ಜಿಲ್ಲಾ ಪಂಚಾಯಿತಿ ತಳೆದಿರುವ ನಿರ್ಲಕ್ಷ್ಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

ನೀರು ಪೂರೈಸದ ಆರ್‌ಒ ಘಟಕಗಳು: ಆರ್‌ಡಬ್ಲ್ಯುಎಸ್ ಸೇರಿದಂತೆ ವಿವಿಧ ಯೋಜನೆಯಡಿ ಹಳ್ಳಿಗಳಲ್ಲಿನ 130 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಿಲ್ಲಾ ಪಂಚಾಯಿತಿ ಅಳವಡಿಸುವ ಯೋಜನೆಗೆ ಚಾಲನೆ ನೀಡಿದೆ. ಆದರೆ, ಯಾವುದೇ ಹಳ್ಳಿಗಳಲ್ಲಿ ಘಟಕಗಳು ಆರಂಭಗೊಂಡಿಲ್ಲ. ಕೆಲವೊಂದು ಕಡೆ ಘಟಕ ಅಳವಡಿಸಲು ಗ್ರಾಮ ಪಂಚಾಯಿತಿಗಳು ಸ್ಥಳ ನೀಡಿಲ್ಲ ಎಂಬ ಸಬೂಬು ಹೇಳುತ್ತಿರುವ ಗ್ರಾಮೀಣ ಮತ್ತು ನಗರ ನೀರು ಪೂರೈಕೆ ಇಲಾಖೆ ಕಿರುನೀರು ಪೂರೈಕೆ ಕಾಮಗಾರಿಗಳನ್ನೂ ಸಹ ಸಂಪೂರ್ಣಗೊಳಿಸಿಲ್ಲ. ಈ ಕಾಮಗಾರಿಗಳಿಗೆ ಬಳಸಬಹುದಾದ ₹22 ಕೋಟಿಯಷ್ಟು ಅನುದಾನವನ್ನು ಕೂಡ ಇಲಾಖೆ ಬಳಸಿಲ್ಲ ಎಂಬುದಾಗಿ ಹುಣಸಗಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಸ್ಥಾವರಮಠ ಅಂಕಿಅಂಶ ನೀಡುತ್ತಾರೆ.
**
ಶೀಘ್ರ ವಿಶೇಷ ಸಭೆ
ವೈಫಲ್ಯ ಕಂಡಿರುವ ಕುಡಿಯುವ ನೀರಿನ ಯೋಜನೆಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಶೀಘ್ರದಲ್ಲಿ ವಿಶೇಷ ಸಭೆ ನಡೆಸಲಾಗುವುದು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವೈಫಲ್ಯ ಕುರಿತು ಕಾರಣ ಕೇಳಿ ಮುಖ್ಯ ಎಂಜಿನಿಯರ್‌ಗೆ ನೋಟಿಸ್‌ ನೀಡಲಾಗಿದೆ. ವಿಶೇಷ ಸಭೆಯಲ್ಲಿ ವಿವರ ಪಡೆದು ಮುಂದಿನ ಕ್ರಮ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ ತಿಳಿಸಿದರು.
**
ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯ
ಕುಡಿಯುವ ನೀರು ಪೂರೈಕೆಯತ್ತ ಗ್ರಾಮ ಪಂಚಾಯಿತಿಗಳೂ ಸಹ ನಿರ್ಲಕ್ಷ್ಯ ತಳೆದಿವೆ. ಪರಿಣಾಮವಾಗಿ ಹಳ್ಳಿಗಳ ಜನರು ಕುಡಿಯುವ ನೀರಿಗಾಗಿ ಸಂಕಷ್ಟ ಪಡುತ್ತಿದ್ದಾರೆ. ಜಿಲ್ಲೆಯ 123 ಗ್ರಾಮ ಪಂಚಾಯಿತಿಗಳಿಗೆ 2017–18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸರ್ಕಾರ 123 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಯೋಜನೆಗಾಗಿಯೇ ₹13.66 ಕೋಟಿ ಅನುದಾನ ಒದಗಿಸಿದ್ದರೂ, ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಅನುದಾನ ಬಳಕೆ ಮಾಡಿರುವ ಬಗ್ಗೆ ಗ್ರಾಮ ಪಂಚಾಯಿತಿಗಳು ವಿವರ ಕೂಡ ಇಟ್ಟಿಲ್ಲ ಎಂದು ಕಂಚಗಾರಹಳ್ಳಿಯ ಮುಖಂಡರಾದ ಚಂದ್ರಕಾಂತ, ವೆಂಕೋಬ ಕಟ್ಟಿಮನಿ ಆರೋಪಿಸುತ್ತಾರೆ.
**
ಬಿಡುಗಡೆಯಾಗಿರುವ ಅನುದಾನ (2017–18ನೇ ಆರ್ಥಿಕ ವರ್ಷ)
ಯಾದಗಿರಿ ಜಿಲ್ಲಾ ಪಂಚಾಯಿತಿಗೆ ₹136 ಕೋಟಿ
ಮೂರು ತಾಲ್ಲೂಕು ಪಂಚಾಯಿತಿಗೆ ₹323ಕೋಟಿ
123 ಗ್ರಾಮ ಪಂಚಾಯಿತಿಗಳಿಗೆ ₹13.66 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.