ADVERTISEMENT

ಅಧಿಕಾರಿಗಳ ಗೈರು: ಸಭೆ ಬಹಿಷ್ಕರಿಸಿದ ಸದಸ್ಯರು

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:04 IST
Last Updated 31 ಜನವರಿ 2017, 7:04 IST
ಯಾದಗಿರಿ: ‘ಯೋ ಅಣ್ಣಾ... ಇಲ್‌ ಕೇಳ್ರೋ ಯಪ್ಪಾ... ಮೀಟಿಂಗ್‌ಗೆ ಬಂದ್‌ ಕೂರ್ರಪ್ಪಾ...’ ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದ ಸದಸ್ಯರನ್ನು ಹಿಂಬಾಲಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ಎಸ್. ರಾಥೋಡ ಮಾಡಿಕೊಂಡ ಮನವಿ ಇದು.
 
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಕೋರಂ ಭರ್ತಿ ಇತ್ತು. ಹಿಂದಿನ ಸಭೆಯ ನಡವಳಿ ಚರ್ಚೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಗೈರು ಮುಂದುವರಿದಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
 
‘ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಇದುವರೆಗೆ ಎರಡು ಸಾಮಾನ್ಯ ಸಭೆಗಳು ನಡೆದಿವೆ. ಇದು ಮೂರನೇ ಸಭೆ. ಆದರೂ ಜೆಸ್ಕಾಂ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಮುಖ ನೋಡಿಲ್ಲ. ಈ ಬಾರಿ ಕೂಡ ಅವರ ಗೈರು ಎಷ್ಟು ಸರಿ’ ಎಂದು ಗಾಜರಕೋಟ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಮಲ್ಲಿಕಾರ್ಜುನ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪ್ರಾಣೇಶ್‌ ರಾವ್‌ ಅವರನ್ನು ಪ್ರಶ್ನಿಸಿದರು.
 
ಇಒ ಪ್ರಾಣೇಶ್‌ ಪ್ರತಿಕ್ರಿಯಿಸಿ,‘ಸಭೆಗೆ ನಿರಂತರ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ. ಇನ್ನು ಮುಂದೆ ಅವರ ಕಾರ್ಯ ವೈಖರಿ ಇದೇ ರೀತಿ ಮುಂದುವರಿದರೆ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆಯಲಾಗುವುದು’ ಎಂದರು.
 
‘ಗುರುಮಠಕಲ್ ಹೋಬಳಿ ವ್ಯಾಪ್ತಿಯಲ್ಲಿ ರೈತರು ಸಾಕಷ್ಟು ವಿದ್ಯುತ್‌ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ನಿತ್ಯ ನಮಗೆ ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಪಡೆಯಬೇಕು. ಆದರೆ, ಅಧಿಕಾರಿಗಳ ಗೈರು ಹಾಜರಿಯಿಂದ ನಾವು ರೈತರಿಗೆ ನಿರುತ್ತರರಾಗಬೇಕಾಗಿದೆ. ರೈತರು ನೇರವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಮುಂಡರಗಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಮಖಬೂಲ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.
 
‘ಬೇಸಿಗೆ ಆರಂಭವಾಗುತ್ತಿದೆ. ಈಗಲೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕುಡಿಯುವ ನೀರು, ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಅಧಿಕಾರಿಗಳು ನೆಪ ಹೇಳಿಕೊಳ್ಳುತ್ತಾ ಅವರ ಸಹಾಯಕರನ್ನು ಸಭೆಗೆ ಕಳುಹಿಸುತ್ತಿದ್ದಾರೆ. ಸಹಾಯಕರಿಂದ ನಾವು ಯಾವ ಸಮಸ್ಯೆ, ಸೌಲಭ್ಯಗಳ ಬಗ್ಗೆ ಚರ್ಚಿಸಬಹುದು ಹೇಳಿ? ಸಹಾಯಕರಿಗೂ ಇಲಾಖೆ ಪ್ರಗತಿ ಬಗ್ಗೆ ಸೂಕ್ತ ಮಾಹಿತಿ ಇರುವುದಿಲ್ಲ. ಹೀಗಾದರೆ ನಾವು ಸಭೆಗೆ ಏಕೆ ಬರಬೇಕು’ ಎಂದು ಮಹಿಳಾ ಸದಸ್ಯೆಯರಾದ ಸರೋಜಮ್ಮ, ಶೈಲಜಾ, ವಿಜಯಲಕ್ಷ್ಮಿ ಅಧ್ಯಕ್ಷರನ್ನು ಪ್ರಶ್ನಿಸಿದರು.
 
ಕೆಲ ಅಧಿಕಾರಿಗಳು ಸದಸ್ಯರ ಮನವೊಲಿಸುವ ಕೆಲಸ ಮಾಡಿದರೂ ಸದಸ್ಯರು ಅಧಿಕಾರಿಗಳಿಗೆ ಮಣಿಯಲಿಲ್ಲ.
 
ನಿಯಮಾವಳಿ ಪ್ರಕಾರ ಅಧಿಕಾರಿಗಳು ಸಭೆಗೆ ಹಾಜರಾಗುವವರೆಗೂ ಸಭೆಗೆ ಹಾಜರಾಗುವುದಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಎಲ್ಲಾ ಸದಸ್ಯರು ಸಭೆ ಬಹಿಷ್ಕರಿಸಿದರು.
 
**
ಸಭೆಗೆ ಹಾಜರಾಗದಿದ್ದರೆ ಕಠಿಣ ಕ್ರಮ
ಸದಸ್ಯರು ಸಭೆ ಬಹಿಷ್ಕರಿಸಿದ್ದು ಬೇಸರ ತಂದಿದೆ. ಅಧಿಕಾರಿಗಳ ನಡೆ ತಿದ್ದಲು ಇನ್ನು ಮುಂದೆ ತಾಲ್ಲೂಕು ಪಂಚಾಯಿತಿ ಕಠಿಣ ಕ್ರಮ ಅನುಸರಿಸಲಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಷು ಎಸ್.ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.
 
**
ಗ್ರಾಮೀಣ ಭಾಗದ ಸಮಸ್ಯೆ ಬಗೆಹರಿಯುವುದು ಅಧಿಕಾರಿಗಳಿಂದ. ಅವರು ಸಭೆಗೆ ಬರಲಿಲ್ಲ ಅಂದರೆ ಸಮಸ್ಯೆ ಬಗೆಹರಿಯುವುದಾದರೂ ಹೇಗೆ? 
-ಭಾಸ್ಕರ ರೆಡ್ಡಿ,
ತಾಲ್ಲೂಕು ಪಂಚಾಯಿತಿ ಸದಸ್ಯ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.