ADVERTISEMENT

ಅಪಾಯಕ್ಕೆ ಆಹ್ವಾನ ನೀಡುವ ಸೇತುವೆ ಗುಂಡಿ

ಬಂಡೋಳಿಯಿಂದ ನಾರಾಯಣಪುರ ತೆರಳುವ ರಸ್ತೆ

ಮಹಾಂತೇಶ ಸಿ.ಹೊಗರಿ
Published 11 ಮಾರ್ಚ್ 2017, 6:17 IST
Last Updated 11 ಮಾರ್ಚ್ 2017, 6:17 IST
ಕಕ್ಕೇರಾ: ಪಟ್ಟಣದ ಪುರಸಭೆ ವ್ಯಾಪ್ತಿಯ ಹೊಸೂರು ಪೈದೊಡ್ಡಿ ಹತ್ತಿರವಿರುವ ರಸ್ತೆಯ ಹಳ್ಳದ ಸೇತುವೆಗೆ ತಡೆಗೋಡೆ ಇಲ್ಲ ಮತ್ತು ಸೇತುವೆಯ ಮಧ್ಯದಲ್ಲಿ ಬೃಹತ್ ಗಾತ್ರದ 10ಕ್ಕೂ ಹೆಚ್ಚು ಗುಂಡಿಗಳು ಬಿದ್ದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ.
 
ಬೀದರ –ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ತಿಂಥಣಿ ಬ್ರಿಜ್ ಪ್ರಾರಂಭದಲ್ಲಿ ಬಂಡೋಳಿ ಗ್ರಾಮದ ಕ್ರಾಸ್‌ನಿಂದ ಲಿಂಗದಳ್ಳಿ, ಗುಗಲಗಟ್ಟಿ, ಬನದೊಡ್ಡಿ, ಹೊಸೂರ ಪೈದೊಡ್ಡಿ, ಬೆಂಚಿಗಡ್ಡಿ, ಏದಲಬಾವಿ, ಗೆದ್ದಲಮರಿ ಮುಖಾಂತರ ನಾರಾಯಣಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಬಂಡೋಳಿಯಿಂದ ನಾರಾಯಣಪುರದವರೆಗೆ ಸುಮಾರು ಇಪ್ಪತ್ತಕ್ಕಿಂತ ಅಧಿಕ ಗ್ರಾಮಗಳು ಬರುತ್ತವೆ.
 
ಈ ರಸ್ತೆಯು ತೀರ ಹದಗೆಟ್ಟು ಅಲ್ಲಲ್ಲಿ ಹಳ್ಳಗಳಿಗೆ ನಿರ್ಮಿಸಿದ ಸೇತುವೆಗಳ ಮಧ್ಯಭಾಗದಲ್ಲಿ  ಬೃಹತ್ ಗಾತ್ರದ ಕಂದಕಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು ಹರಸಾಹಸ ಪಡಬೇಕಾಲ್ಲದೆ ಸಣ್ಣ ಪುಟ್ಟ ಅಪಘಾತಗಳಾಗಿವೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
 
ಕಳೆದ ಎರಡು ಮೂರು ವರ್ಷಗಳಿಂದ ಕಂದಕಗಳು ಬಿದ್ದಿದ್ದು, ಸೇತುವೆಗೆ ಹಾಕಿದ ಪೈಪುಗಳು ಒಡೆದು ಮೊಳಕಾಲುದ್ದ ತಗ್ಗು ದಿಣ್ಣೆಗಳು ಬಿದ್ದಿವೆ. ಈ ರಸ್ತೆಯಲ್ಲಿ ಅತಿ ಹೆಚ್ಚು ಸಂಚರಿಸುವ ಬೈಕ್‌, ಆಟೊ, ಟ್ರ್ಯಾಕ್ಟರ್, ಜೀಪು, ಟಂಟಂ ವಾಹನಗಳು ಈ ರಸ್ತೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ಸಂಚರಿಸುವ ವಾಹನಗಳ ಪರಿಸ್ಥಿತಿಯಂತೂ ಹೇಳತೀರದು.
 
ಈ ಸೇತುವೆಯ ಮೇಲೆ ಎಚ್ಚರ ತಪ್ಪಿ ವಾಹನ ಚಲಾಯಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ. ರಸ್ತೆ ಸ್ಥಿತಿ ಗೊತ್ತಿಲ್ಲದ ಹೊಸಬರೇನಾದರು ಈ ರಸ್ತೆ ಮುಖಾಂತರ ರಾತ್ರಿ ಹೊತ್ತು ಪ್ರಯಾಣ ಮಾಡಿದರೆ ಸೇತುವೆ ಮೇಲೆ ಇರುವ ಕಂದಕಕ್ಕೆ ಬಿದ್ದು ಕೈಕಾಲು ಮುರಿದುಕೊಳ್ಳುವ ಪರಿಸ್ಥಿತಿ ಸಾಧ್ಯತೆ ಹೆಚ್ಚು.
 
ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೇತುವೆ ಮೇಲಿರುವ ಕಂದಕಗಳನ್ನು ಮುಚ್ಚಿಸಿ ಹೊಸ ಪೈಪ್‌ಗಳನ್ನು ಅಳವಡಿಸಿ ಸೇತುವೆ ದುರಸ್ತಿ ಕಾರ್ಯ ನಿರ್ಮಿಸಬೇಕು ಎಂದು ಹೊಸೂರ ಗ್ರಾಮಸ್ಥರಾದ ದೇವಿಂದ್ರಪ್ಪ ಕುಂಬಾರ, ಅಂಬ್ರಯ್ಯ ಸ್ವಾಮಿ, ಮುದಕಪ್ಪ ನೇಕಾರ, ಆನಂದ ಕುಂಬಾರ, ಆದಪ್ಪ ಗೋಸಲರ್, ಸಾಮರಾಯ ದೊರೆ,ಸಾಮಣ್ಣ ಜಂಪಾ ಆಗ್ರಹಿಸಿದ್ದಾರೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.