ADVERTISEMENT

ಕಲೆ ಯಾರ ಸ್ವತ್ತೂ ಅಲ್ಲ: ವಿಶ್ವೇಶ್ವರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 10:36 IST
Last Updated 31 ಜನವರಿ 2015, 10:36 IST

ಯಾದಗಿರಿ: ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಅಜಲಾಪುರದ ಸರ್ಕಾರಿ ಪ್ರೌಢಶಾಲೆಗಳ ಆಶ್ರಯದಲ್ಲಿ ಗಡಿ ನಾಡ ರಸಗ್ರಹಣ ಕಾರ್ಯಕ್ರಮವು ಶುಕ್ರವಾರ ತಾಲ್ಲೂಕಿನ ಅಜಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

ಲಲಿತ ಕಲಾ ಅಕಾಡೆಮಿ ಸದಸ್ಯೆ ಡಾ, ವಿಶ್ವೇಶ್ವರಿ ತಿವಾರಿ ಮಾತನಾಡಿ, ಕಲೆ ಯಾರ ಸ್ವತ್ತೂ ಅಲ್ಲ. ಅದು ಎಲ್ಲರನ್ನೂ ತನ್ನಡೆಗೆ ಸೆಳೆಯುತ್ತದೆ. ಆದರೆ ಯಾರು ಕಲೆಯ ಬಗ್ಗೆ ಆಸಕ್ತಿ ಹೊಂದಿ, ಶ್ರಮಪಡುತ್ತಾರೋ ಅವರ ಸ್ವತ್ತಾಗುತ್ತದೆ ಎಂದರು. ರಾಜ್ಯದ ಗಡಿ ಭಾಗದಲ್ಲಿ ಭಾಷೆಯ ತೊಂದರೆ ಸಹಜ. ಆದರೆ ಮಕ್ಕಳ ಕಲಿಕೆ ಮತ್ತು ಸೃಜನಶೀಲತೆಗೆ ಯಾವುದೇ ಸಮಸ್ಯೆಯಿಲ್ಲ. ಇಲ್ಲಿನ ಮಕ್ಕಳು ರಚಿಸಿದ ನಾನಾ ವಿನ್ಯಾಸದ ಕಲಾಕೃತಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣದ ಒಂದು ಭಾಗವಾದ ಕಲೆಯು ಅಭಿವ್ಯಕ್ತಿಯ ಮಾಧ್ಯಮವಾಗಿದೆ. ಕಲೆಯಿಂದ ಮನಸ್ಸಿಗೆ ಆನಂದ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು. ಕಲಾ ಉಪನ್ಯಾಸಕ ಡಾ. ಅಶೋಕ ಶಟಕಾರ ಮಾತನಾಡಿ, ಚಿತ್ರಕಲೆ ಇತ್ತೀಚೆಗೆ ಆರಂಭವಾ­ಗಿದ್ದಲ್ಲ. ಆದಿ ಮಾನವನ ಕಾಲದಿಂದ ಬೆಳೆದು ಬಂದ ಈ ಕಲೆಗೆ ತನ್ನದೇ ಆದ ಇತಿಹಾಸವಿದೆ.

ಆರಂಭದಲ್ಲಿ ಬರವಣಿಗೆಯ ಜ್ಞಾನ ಹೊಂದಿರದ ಮನುಷ್ಯ, ಚಿತ್ರಕಲೆಗಳ ಮೂಲಕ ಸಂವಾದಿಸುತ್ತಿ­ದ್ದನು. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಬಗೆಗಿನ ಕಾಳಜಿ, ಗೌರವ ಕುಂದುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಕಲಬುರ್ಗಿಯ ದಿ ಆರ್ಟ್‌ ಇಂಟಿಗ್ರೇಶಿಯನ್‌ನ ಕಲಾವಿದ ಬಸವ­ರಾಜ ಕಾಮಾಜಿಯವರು, ಜಿಲ್ಲಾ ಪಂಚಾ­ಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ ಅವರ ನೈಜ ಚಿತ್ರವನ್ನು ಆಯಿಲ್ ಪೆಂಟ್‌ನಲ್ಲಿ ಚಿತ್ರಿಸುವ ಮೂಲಕ ಗಮನ ಸೆಳೆದರು.

ಅಜಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮ­ಲಿಂಗಮ್ಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ, ಮುಖ್ಯಾಧ್ಯಾಪಕ ಎನ್.ನರಸಿಂಹಪ್ಪ, ಚಿತ್ರಕಲಾ ಶಿಕ್ಷಕರ ಸಂಘದ ಯಾದಗಿರಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಗಡ್ಡಿ, ಮುಖಂಡರಾದ ಶಂಕ್ರಪ್ಪ ಕುಂಬಾರ, ಅಂಜಪ್ಪ ಉಪ್ಪಾರ, ಹುಸೇನಪ್ಪ, ಓಂಕಾರ, ಇಮ್ರಾನ್, ಶ್ರೀಹರಿಗೌಡ, ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಶಿವಶರಣಪ್ಪ ಸ್ವಾಗತಿಸಿದರು. ಮಹಿಬೂಬ್‌ ನಿರೂಪಿಸಿದರು, ಮಲ್ಲಿಕಾರ್ಜುನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.