ADVERTISEMENT

ಕಾಲುವೆಗೆ ನೀರು: ಅವಧಿ ವಿಸ್ತರಣೆಗೆ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 7:17 IST
Last Updated 18 ಮಾರ್ಚ್ 2017, 7:17 IST

ಸುರಪುರ: ಬೆಂಗಳೂರಿನಲ್ಲಿ ಶುಕ್ರವಾರ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸುವ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಈ ಕುರಿತು ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಶಾಸಕ, ‘ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಮಾರ್ಚ್‌ 24ರಿಂದ 28ರ ವರೆಗೆ ಕಾಲುವೆಗೆ ನೀರು ಹರಿಯುತ್ತದೆ. ನಂತರವೂ ಕಾಲುವೆಯಲ್ಲಿ 3–4 ದಿನ ನೀರು ಹರಿಯಲಿದೆ. ಬೆಳೆಗಳು ಕಟಾವಿಗೆ ಬರಬೇಕಾದರೆ ಏಪ್ರಿಲ್ 15ರ ವರೆಗೆ ಕಾಲುವೆಗೆ ನೀರು ಹರಿಸಬೇಕು’ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

‘ಈ ಭಾಗದಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುವೆಗೆ ನೀರು ಹರಿಸುವ ಅವಧಿ ವಿಸ್ತರಿಸಿದಲ್ಲಿ ಆಗ ಹಿಂಗಾರು ಬೆಳೆ ರೈತರ ಕೈಹಿಡಿಯುತ್ತದೆ. ಇಲ್ಲವಾದರೆ ರೈತರು ಕೋಟ್ಯಂತರ ರೂಪಾಯಿ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ನೀರಾವರಿ ಸಲಹಾ ಸಮಿತಿ ನಿರ್ಧಾರದಂತೆ ನೀರು ಹರಿಯುತ್ತದೆ. ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ಈ ಸಂಬಂಧ ಚರ್ಚಿಸಿ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆಯುತ್ತೇನೆ. ಹೆಚ್ಚುವರಿ ನೀರು ಇದ್ದಲ್ಲಿ 4-6 ದಿನ ಹೆಚ್ಚುವರಿಯಾಗಿ ಹರಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ನಂತರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ಕರೆದು ಮನವಿಗೆ ಸ್ಪಂದಿಸುವಂತೆ ತಿಳಿಸಿದರು. ಕಾಲುವೆಗೆ ನೀರು ಹರಿಸುವ ಅವಧಿ ವಿಸ್ತರಿಸಲು ನಿರಂತರ ಪ್ರಯತ್ನ ನಡೆದಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದರು.

ಸಿಎಂ ಭೇಟಿ ವೇಳೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ವಿಠ್ಠಲ ಯಾದವ, ಮುಖಂಡರಾದ ಸೂಲಪ್ಪ ಕಮತಗಿ, ವೆಂಕೋಬ ಯಾದವ, ಶಾಂತಗೌಡ ಚನ್ನಪಟ್ಟಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.