ADVERTISEMENT

ಕಾಲುವೆಗೆ ನೀರು ಹರಿಸಲು ಪಾದಯಾತ್ರೆ 

ಏಪ್ರಿಲ್‌ 15ರವರೆಗೆ ನೀರು ಹರಿಸುವಂತೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:23 IST
Last Updated 11 ಮಾರ್ಚ್ 2017, 6:23 IST
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ರಾಜ್ಯದ ರೈತರು ಬಿತ್ತಿದ ಬೆಳೆ ಇನ್ನೂ ಕಟಾವಿಗೆ ಬಂದಿಲ್ಲ. ಆದರೂ ರಾಜ್ಯದ ರೈತರ ಜಮೀನಿಗೆ ನೀರು ಇಲ್ಲದ ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಹರಿಸುವುದು ಯಾವ ನ್ಯಾಯ ಎಂದು  ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ಚಿಂಚೋಳಿ ಪ್ರಶ್ನಿಸಿದರು.  
 
ಶುಕ್ರವಾರ ಹುಣಸಗಿ ಸಮೀಪದ ನಾರಾಯಣಪುರದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ  ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
 
ಈಗಾಗಲೇ ಕಳೆದ ವರ್ಷ ಜಿಲ್ಲೆಯಲ್ಲಿ ಸಾಲಬಾಧೆಯಿಂದ ಅತಿಹೆಚ್ಚು ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಈ ಬಾರಿ ಸಮರ್ಪಕವಾಗಿ ನೀರು ಸಿಗದಿದ್ದರೇ ಮತ್ತೆ ರೈತರು ಸಂಕಷ್ಟ ಎದುರಿಸಿ ಧೈರ್ಯ ಕಳೆದುಕೊಳ್ಳಲಿದ್ದಾರೆ. ಹಾಗಾಗಿ ಏಪ್ರಿಲ್‌ 15 ರವರೆಗೆ ಕಾಲುವೆಗೆ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು. 
 
ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮಹಾದೇವಿ ಬೇವಿನಾಳಮಠ ಮಾತನಾಡಿ,  ರೈತರು ಸಾಲಸೋಲ ಮಾಡಿ ಒಂದು ಎಕರೆಗೆ ಅಂದಾಜು 30 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಈಗ ಒಂದು ಹನಿ ನೀರು ಕೂಡಾ ಅತ್ಯವಶ್ಯಕವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರನ್ನು ಕಡೆಗಣಿಸಬಾರದು ಎಂದು ಆಗ್ರಹಿಸಿದರು. 
 
ಮುಖಂಡ ರಾಮನಗೌಡ ಪಾಟೀಲ ಯಾಳಗಿ ಮಾತನಾಡಿ, ಇಲ್ಲಿನ ರೈತರು ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ ಮಹಾರಾಷ್ಟ್ರಕ್ಕೆ ನೀರು ಹರಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ವಾರಾಬಂದಿ ಮಾಡದೇ ಪ್ರತಿದಿನ ಏಪ್ರಿಲ್‌ 15 ರವರೆಗೆ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು. ಮುಖಂಡ ಶಾಂತರಡ್ಡಿ ಚೌದ್ರಿ ಮಾತನಾಡಿದರು.
 
ಈ ಸಂದರ್ಭದಲ್ಲಿ ಮನವಿ ಸ್ವಿಕರಿಸಿ ಪ್ರಭಾರ ಮುಖ್ಯ ಎಂಜಿನಿಯರ್ ವೀರಣ್ಣ ನಗರೂರ ಮಾತನಾಡಿ, ಕಾಲುವೆಗೆ ನೀರು ಹರಿಸುವ ಮತ್ತು ಸ್ಥಗಿತಗೊಳಿಸುವ ನಿರ್ಧಾರದ ಕುರಿತು ಐಸಿಸಿ ಸಭೆಯಲ್ಲಿ ತಿರ್ಮಾನಿಸಲಾಗುತ್ತದೆ. ಆದ್ದರಿಂದ ಈ ಕುರಿತು ತಮ್ಮ ಮನವಿಯನ್ನು ಐಸಿಸಿ ಕಾರ್ಯದರ್ಶಿಗಳಿಗೆ ಕಳಿಸುವುದಾಗಿ ತಿಳಿಸಿದರು.
 
ಅಲ್ಲದೇ ನಮ್ಮಲ್ಲಿ ಜೂನ್ ಅಂತ್ಯದವರೆಗೂ ಸಹಕಾರ ಒಪ್ಪಂದದಂತೆ  ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಾಪಾಡಿಕೊಂಡು ಮಹಾರಾಷ್ಟ್ರಕ್ಕೆ ನೀರು ಕೊಡಲಾಗಿದೆ ಎಂದು ವಿವರಿಸಿದರು. ಆಗ ಪಟ್ಟು ಬಿಡದೇ ರೈತರು ಪ್ರತಿಭಟನೆ ಮುಂದುವರೆಸಿದರು. ಆಗ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.  ಕೆಂಭಾವಿಯಿಂದ ನಾರಾಯಣಪುರ ಮುಖ್ಯ ಎಂಜಿನಿಯರ್ ಕಚೇರಿಯವರೆಗೂ ಸುಮಾರು 50 ಕಿಮೀವರೆಗೆ ರೈತರು ಪಾದಯಾತ್ರೆಯ ಮೂಲಕ ಬಂದಿದ್ದರು.
 
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಶ್ರೀಶೈಲ ಕಾಚಾಪುರ, ಬಸನಗೌಡ ಮುದನೂರ, ಮಲ್ಲನಗೌಡ ನಗನೂರ, ದಾದಾ ಅಗ್ನಿ, ಶಾಂತಯ್ಯ ಗುತ್ತೇದಾರ, ಮಲಕಣ್ಣ ಸಾಹುಕಾರ, ವಿಶ್ವನಾಥರಡ್ಡಿ ಹಿರೇಗೌಡ್ರ, ಭೀಮಾಶಂಕರ ಯಾಳಗಿ, ಮಲ್ಲೇಶಿ ಕೊಳ್ಳಿ, ದೇವರಡ್ಡಿ ಯಡಹಳ್ಳಿ, ಸಾಯಬಣ್ಣ ದೊರೆ, ಸುರೇಶ ಬಪ್ಪರಗಿ, ಅಯ್ಯಪ್ಪಣ್ಣ ಪಡಶೆಟ್ಟಿ, ರಮೇಶ ಬಿರಾದಾರ ಇದ್ದರು.
 
ಎಎಸ್ಪಿ ಶಿವಪ್ರಕಾಶ ದೇವರಾಜ ಅವರ ನೇತೃತ್ವದಲ್ಲಿ ಸಿಪಿಐಗಳಾದ ಟಿ.ಎ.ಪವಾರ್, ವಿಜಯ ಮುರಗುಂಡಿ, ಪಿಎಸ್ಐಗಳಾದ ತಿಪ್ಪಣ್ಣ ಠಾಠೋಡ, ಕಾಳಪ್ಪ ಬಡಿಗೇರ, ಅರುಣಕುಮಾರ ಮತ್ತು ಸಿಬ್ಬಂದಿ ಬಂದೊಬಸ್ತ್‌ ಒದಗಿಸಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.