ADVERTISEMENT

ಕುರಿಹಾಲು ಕುಡಿದು ನಾಲ್ಕು ದಿನ ಕಳೆದರು

ಭೀಮಶೇನರಾವ ಕುಲಕರ್ಣಿ
Published 22 ಸೆಪ್ಟೆಂಬರ್ 2017, 6:59 IST
Last Updated 22 ಸೆಪ್ಟೆಂಬರ್ 2017, 6:59 IST
ಹುಣಸಗಿ ಸಮೀಪದ ಕೃಷ್ಣಾ ನದಿ ತೀರದ ಮೇಲಿನ ಗಡ್ಡಿ ಗ್ರಾಮದ ಕುರಿಗಾಹಿಗಳೊಂದಿಗೆ ಪಾಲಕರು
ಹುಣಸಗಿ ಸಮೀಪದ ಕೃಷ್ಣಾ ನದಿ ತೀರದ ಮೇಲಿನ ಗಡ್ಡಿ ಗ್ರಾಮದ ಕುರಿಗಾಹಿಗಳೊಂದಿಗೆ ಪಾಲಕರು   

ಹುಣಸಗಿ: ‘ಮಕ್ಕಳು ಮೂರು ದಿನದಿಂದ ಏನೂ ಊಟಾನೇ ಮಾಡಿಲ್ಲರೀ, ಅದು ನೆನಪಾದ್ರ ಕರಳೇ ಕಿತ್ತಿ ಬರತಾವರೀ' ಎಂದು ನಾಗಮ್ಮ ಕಣ್ಣೀರು ಸುರಿಸಿದರು.
ನಾರಾಯಣಪುರ ಗ್ರಾಮದ ಬಳಿಯ ಮೇಲಿನಗಡ್ಡಿಯ ಕುರಿಗಾಹಿಗಳು ನಾಲ್ಕು ದಿನಗಳ ಹಿಂದೆ ಅನುಭವಿಸಿದ ತೊಂದರೆ ಕುರಿತು ಚಂದ್ರಶೇಖರನ ತಾಯಿ ಮಕ್ಕಳನ್ನು ಕಂಡ ಖುಷಿಯಲ್ಲಿಯೇ ಮಾತನಾಡಿದರು.

ಈ ಗ್ರಾಮದ ಜನರು ಆಗಾಗ ನದಿ ತೀರದಲ್ಲಿ ಕುರಿಗಳನ್ನು ಮೇಯಿಸಲು ಹೋಗುವುದು ಸಾಮಾನ್ಯ. ಆದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಕೆಲವರು ತಿಳಿಸಿದರು.

‘ನಾವು ಬಡವರಿ ಸಾಹೇಬ್ರ. ನಮಗ ಹೊಲ ಇಲ್ಲ. ನಾನು ನನ್ನ ಮಕ್ಕಳು ಕಳೆದ ಐದು ವರ್ಷಗಳಿಂದಲೂ ಕುರಿ ಸಾಕಣೆ ಮಾಡಿಕೊಂಡೇ ಜೀವನ ನಡೆಸುತ್ತಿದ್ದೇವೆ’ ಎಂದು ಸೋಮನಗೌಡನ ತಂದೆ ಸಿದ್ದಪ್ಪ ಹೇಳಿದರು.

ADVERTISEMENT

ಮೇಲಿನಗಡ್ಡಿ ಗ್ರಾಮದ ಮೂರು ಜನ ಕುರಿಗಾಹಿಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಗ್ರಾಮದ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಕುತೂಹಲ, ಆತಂಕದಿಂದ ನೋಡುತ್ತಾ ನಿಂತಿದ್ದರು.

ಜೀವ ರಕ್ಷಕವಾದ ಕುರಿಹಾಲು: ನಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ರೊಟ್ಟಿ ಬುತ್ತಿ ಒಪ್ಪೊತ್ತಿಗೆ ಖಾಲಿಯಾಗಿತ್ತು. ಆದರೆ, ಪ್ರವಾಹ ರಾತ್ರಿ ಕಡಿಮೆಯಾಗಬಹುದು, ಬೆಳಿಗ್ಗೆ ಕಡಿಮೆಯಾಗಬಹುದು ಎಂಬ ಭರವಸೆಯಲ್ಲಿಯೇ ಇದ್ದೆವು. ಹಸಿವಾದಾಗ ಕುರಿ ಹಾಲನ್ನೇ ಕುಡಿದು ಭಯದಲ್ಲಿಯೇ ಇದ್ದೆವು’ ಎಂದು ಕುರಿಗಾಹಿ ಗದ್ದೆಪ್ಪ ವಿವರಿಸಿದರು.

‘ಆ ದಡದಲ್ಲಿ ಗ್ರಾಮದ ಜನರು ಕಾಣುತ್ತಿದ್ದರು. ಲುಂಗಿ, ಟವೆಲ್‌ ಬೀಸುತ್ತಾ, ಧೈರ್ಯ ಕಳೆದುಕೊಳ್ಳಬೇಡಿ ಎಂದು ತಿಳಿಸುತ್ತಿದ್ದರು. ಇದರಿಂದಾಗಿ ನಾವು ಧೈರ್ಯದಿಂದಲೇ ರಾತ್ರಿಗಳನ್ನು ಕಳೆದೆವು. ನಮ್ಮೊಂದಿಗೆ ಬ್ಯಾಟರಿ, ಸಾಕುನಾಯಿ ಇದ್ದರಿಂದ ಅನುಕೂಲವಾಯಿತು’ ಎಂದರು.

ಜಿಲ್ಲಾಡಳಿತ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಹಾಯದಿಂದ ಕುರಿಗಾಹಿಗಳ ರಕ್ಷಣೆಗೆ ಮುಂದಾಗಿದ್ದರು. ಆದರೆ, ಕುರಿಗಾಹಿಗಳು ತಮ್ಮ ಸಾಕುನಾಯಿಯನ್ನು ಕರೆದುಕೊಂಡು ಬರಲು ಮುಂದಾದರು. ಇದಕ್ಕಾಗಿ ಮತ್ತೆ 15 ನಿಮಿಷ ಕಾಯ್ದ ಪ್ರಸಂಗವೂ ನಡೆಯಿತು.

ಕುರಿಗಾಹಿಗಳು ಸುರಕ್ಷಿತವಾಗಿ ಮನೆ ಸೇರಲು ಆರು ಗಂಟೆ ಕಾಲ ಶ್ರಮಿಸಿದ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು, ಅರಣ್ಯ ಇಲಾಖೆ, ಸ್ಥಳೀಯ ಮೀನುಗಾರರನ್ನು ಎಲ್ಲರೂ ಕೊಂಡಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.