ADVERTISEMENT

ಕೊಂಕಲ್‌ ಆದರ್ಶ ಗ್ರಾಮಕ್ಕೆ ಆಯ್ಕೆ: ದುರ್ಗೇಶ

ಗ್ರಾಮ ವಾಸ್ತವ್ಯ: 138 ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 11:08 IST
Last Updated 29 ಜನವರಿ 2015, 11:08 IST

ಗುರುಮಠಕಲ್‌: ಗ್ರಾಮದಲ್ಲಿನ ವಿವಿಧ ಕುಂದು ಕೊರತೆಗಳ ನಿವಾರಣೆಗೆ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಡಿಯಲ್ಲಿ ಬುಧವಾರ ಕೊಂಕಲ್‌ ಗ್ರಾಮದಲ್ಲಿ ಉಪವಿಭಾಗಾಧಿಕಾರಿ ದುರ್ಗೆಶ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದೇಪಲ್ಲಿ, ಪಾಡುಪಲ್ಲಿ, ಪರಮೇಶಪಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಅವರು, ಪರಿಶೀಲನೆ ನಡೆಸಿದರು. ನಂತರ ಸಾರ್ವಜನಿಕರಿಂದ 138 ಅಹವಾಲುಗಳನ್ನು ಸ್ವೀಕರಿಸಿದರು.

ವಸತಿ ಸಮಸ್ಯೆ, ಪಡಿತರ ಚೀಟಿ, ಆಧಾರ್‌ ನೋಂದಣಿ ಸಮಸ್ಯೆಗಳು, ಜಮೀನಿನ ಮ್ಯುಟೇ­ಷನ್‌, ಪಹಣಿಯಲ್ಲಿ ಹೆಸರು ಬದಲಾವಣೆ ಸೇರಿದಂತೆ ಹಲವಾರು ಸಮಸ್ಯೆಗಳ ಅಹವಾಲು­ಗಳನ್ನು ಸಾರ್ವಜನಿಕರು ಸಲ್ಲಿಸಿದರು. ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಇರುವುದಾಗಿ ಗ್ರಾಮಸ್ಥರು ತಿಳಿಸಿದರು. ಬಹುತೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆ, ಮಹಿಳಾ ಶೌಚಾಲಯಗಳು ಇಲ್ಲದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದರು.

ಕೊಂಕಲ್‌ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಾಮಗಾರಿ, ಶಿಥಿಲಾವಸ್ಥೆಯಲ್ಲಿ ಅಂಬೇಡ್ಕರ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ  ದುರ್ಗೇಶ ಸ್ಥಳ ಪರಿಶೀಲನೆ ನಡೆಸಿದರು.
ನಂದೇಪಲ್ಲಿ ಗ್ರಾಮದಲ್ಲಿ ಹಲವಾರು ವರ್ಷಗಳ ಬೇಡಿಕೆಯಾದ ಕುಡಿಯುವ ನೀರಿನ ಟ್ಯಾಂಕ್‌ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ತ್ವರಿತಗತಿಯಲ್ಲಿ ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಅದರಿಂದ ಸರಬರಾಜು ಆಗುವ ಕಲುಷಿತ ನೀರಿನಿಂದಾಗಿ ಗ್ರಾಮದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಕೊಂಕಲ್‌ನಿಂದ ಪಾಡುಪಲ್ಲೆ ಗ್ರಾಮದ ಮಾರ್ಗವಾಗಿ ತೆಲಂಗಾಣದ ನಾರಾಯಣಪೇಟ್‌ ಪಟ್ಟಣಕ್ಕೆ ಹೋಗುವ ಮುಖ್ಯ ರಸ್ತೆ ಹದಗೆಟ್ಟಿದ್ದು, ಪಾಡುಪಲ್ಲಿ ಗ್ರಾಮದ ಸಿಸಿ ರಸ್ತೆ, ಚರಂಡಿ. ಮಹಿಳಾ ಶೌಚಾಲಯ ಕೊರತೆಯನ್ನು ಗಮನಿಸಿದರು. ರಸ್ತೆ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಂಕಲ್‌ ವಲಯವಾಗಿದ್ದು, ಇದರ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ದೌರ್ಜನ್ಯ ಮತ್ತು ಸಮಸ್ಯೆ­ಗಳನ್ನು ಪರಿಹರಿಸಲು ಗ್ರಾಮದಲ್ಲಿ ಪೊಲೀಸ್‌ ಠಾಣೆ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟರು. ಆಸ್ಪತ್ರೆಗೆ ಭೇಟಿ ನೀಡಿದಾಗ ಕೆಲ ಸಿಬ್ಬಂದಿ ಗೈರು ಹಾಜರಿರುವುದು ಕಂಡು ಬಂದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಉಪ­ವಿಭಾಗಾಧಿಕಾರಿ ದುರ್ಗೇಶ, ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚಿ, ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು.

ಕೊಂಕಲ್‌ ಗ್ರಾಮವು ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ, ಪ್ರತಿಯೊಂದು ಮನೆಗೆ ಶೌಚಾಲಯ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಗಳು ಬಗೆಹರಿಯಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ  ಅಭಿವೃದ್ಧಿ ಅಧಿಕಾರಿ ರಾಮು ಪವಾರ, ಉಪ ತಹಶೀಲ್ದಾರ ಮಹ್ಮದ್‌ ಶಕೀಲ್‌ ಮತ್ತು ಕಚೇರಿಯ ಸಿಬ್ಬಂದಿ, ಕೆಲವು ಅಹವಾಲುಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹರಿಸಲು ಮುಂದಾದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬಣ್ಣ ಕಾವಲಿ, ಪಶು ವೈದ್ಯಾಧಿಕಾರಿ ತಾಯಪ್ಪ, ಭಗವಂತರೆಡ್ಡಿ, ಬಾಬು ಕೊಂಡಲ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಶಪ್ಪ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.