ADVERTISEMENT

ಕೊನೆಗೂ ಕೈಗೂಡದ ಸೂರು ಕಟ್ಟಿಕೊಳ್ಳುವ ಕನಸು

ಮಾರೆಮ್ಮ ಬಸಣ್ಣ ಶಿರವಾಟಿ ಕಣ್ಮರೆ: ಬಡವಾದ ಬುರ‍್ರಾ ಕಥಾ ಲೋಕ

ಮಲ್ಲೇಶ್ ನಾಯಕನಹಟ್ಟಿ
Published 22 ಮಾರ್ಚ್ 2018, 13:35 IST
Last Updated 22 ಮಾರ್ಚ್ 2018, 13:35 IST
ತಂಬೂರಿ ಹಿಡಿದ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ
ತಂಬೂರಿ ಹಿಡಿದ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ   

ಯಾದಗಿರಿ: ಬುರ‍್ರಾ ಕಥೆ ಹೇಳುವುದು ಅಂದರೆ ಹಾಡು ಹೇಳಿದಷ್ಟು ಸುಲಭವಲ್ಲ. ಅದು ರಕ್ತಗತವಾಗಿ ಮೈಗೂಡಿರಬೇಕು. ಬುಡ್ಗ ಜಂಗಮ ಸಮುದಾಯದ ಅನೇಕ ಕಲಾವಿದರು ಇದ್ದರೂ ಅವರುಗಳು ಹಗಲುವೇಷಗಳನ್ನು ಹಾಕಿಕೊಂಡು ಮನೆಮನೆಗೆ ತಿರುಗಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾರೆ. ಬುರ‍್ರಾ ಕಥೆ ಹೇಳಲು ಅನೇಕರಿಗೆ ಬರುವುದಿಲ್ಲ. ಮಾರೆಮ್ಮ ಅಂತಹ ಕಥೆ ಹೇಳುವ ಏಕೈಕ ಅಭಿಜಾತ ಕಲಾವಿದೆಯಾಗಿದ್ದರು. ಮಂಗಳವಾರ ಮಧ್ಯರಾತ್ರಿ ಆಸ್ತಮಾದಿಂದ ಮಾರೆಮ್ಮ ಕಣ್ಮರೆಯಾಗುವ ಮೂಲಕ ಬುರ‍್ರಾ ಕಥಾ ಲೋಕ ಈಗ ಬಡವಾಗಿದೆ.

ಯಲಸತ್ತಿ ಗ್ರಾಮದ ರಾಮಯ್ಯ–ರಾಮುಲಮ್ಮ ದಂಪತಿಯ ನಾಲ್ಕು ಮಂದಿ ಮಕ್ಕಳಲ್ಲಿ ಮಾರೆಮ್ಮ ಎರಡನೆಯ ಪುತ್ರಿ.

ತಂದೆ ರಾಮಯ್ಯ ಬುರ‍್ರಾ ಕಥೆ ಹೇಳುವ ಮೂಲಕ ಭಿಕ್ಷೆ ತಂದು ಮಕ್ಕಳನ್ನು ಸಾಕುತ್ತಿದ್ದರು. ತಂದೆಯ ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಭಿಕ್ಷೆಗಾಗಿ ಮಾರೆಮ್ಮ ಮನೆಮನೆಗೆ ಹೋದಾಗ ತಂದೆಯಂತೆ ಬುರ‍್ರಾ ಕಥೆ ಹೇಳುವಂತೆ ಜನರು ಒತ್ತಾಯಿಸುತ್ತಿದ್ದರು. ಆದರೆ, ಬಾಲಕಿ ಮಾರೆಮ್ಮಳಿಗೆ ಆ ಕಲೆ ರೂಢಿ ಇರಲಿಲ್ಲ. ಜನರು ಬಾಲಕಿಗೆ ಭಿಕ್ಷೆ ಹಾಕಲಿಲ್ಲ. ಒಂದು ಹಿಡಿಯಷ್ಟು ಸಿಕ್ಕ ಜೋಳದ ಹಿಟ್ಟು ಹಿಡಿದು ಅಳುತ್ತಾ ಮನೆ ಸೇರಿದ್ದಳು. ಅಂದಿನಿಂದ ಬುರ‍್ರಾ ಕಥೆಯತ್ತ ಮಾರೆಮ್ಮ ಆಸಕ್ತಿ ಬೆಳೆಸಿಕೊಂಡರು.

ADVERTISEMENT

ತಂದೆಯ ಆರೋಗ್ಯ ಸರಿಹೋದ ಮೇಲೆ ತಂದೆಯ ಜತೆಗೆ ಊರೂರು, ಮನೆಮನೆಗೆ ತಿರುಗಿ ಭಿಕ್ಷೆ ಬೇಡಲು ರೂಢಿಸಿಕೊಂಡರು. ಕಥೆ ಹೇಳುವ ಸಂದರ್ಭದಲ್ಲಿ ಅಪ್ಪನ ಜತೆಗೆ ದನಿ ಗೂಡಿಸತೊಡಗಿದಳು. ಬಾಲನಾಗಮ್ಮ ಕಥೆ, ಲಕ್ಷ್ಮಮ್ಮ ಕಥೆ, ರಾಮುಲಯ್ಯ, ರೇಣುಕಾ ಯಲ್ಲಮ್ಮ ಚರಿತ್ರೆಯನ್ನು, ರಾಜ ಮನೆತನ ಕಥೆಗಳನ್ನು ಹೇಳಲು ಕಲಿತುಕೊಂಡರು. ತಂಬೂರಿ ಹಾಗೂ ಗುಮಟೆಯನ್ನು ಕಥೆಗೆ ತಕ್ಕಂತೆ ನುಡಿಸುವುದು ರೂಢಿಯಾಯಿತು.

ಬರುಬರುತ್ತಾ ಮಾರೆಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಗುರುತಿಸಿಕೊಂಡಿದ್ದರು. ತಂದೆಗಿಂತ ಮಗಳೇ ಹೆಚ್ಚು ಭಿಕ್ಷೆ ತರುವಂತಾಯಿತು. ಒಮ್ಮೊಮ್ಮೆ ತಂದೆ ರಾಮಯ್ಯ, ‘ನೀನೇ ಹೋಗಮ್ಮ.. ನೀನು ಹೇಳುವ ಕಥೆ ಕೇಳಲು ಜನರು ಇಷ್ಟಪಡುತ್ತಾರೆ’ ಎಂದು ಹೇಳುವಷ್ಟರ ಮಟ್ಟಿಗೆ ಮಾರೆಮ್ಮ ಬುರ‍್ರಾ ಕಥೆ ಕಲೆಯನ್ನು ಒಲಿಸಿಕೊಂಡಿದ್ದರು.

ಬಸಣ್ಣ ಶಿರವಾಟಿಯನ್ನು ಕೈಹಿಡಿದ ಮೇಲೆ ಉಪಜೀವನಕ್ಕೆ ಮಾರೆಮ್ಮ ಬುರ‍್ರಾ ಕಥೆಯನ್ನೇ ಆಶ್ರಯಿಸಬೇಕಾಗಿ ಬಂತು. ಮಗ ಮಹಾದೇವ ಹುಟ್ಟಿದ ಮೇಲೆ ಜೀವನದ ಸಂಕಷ್ಟಗಳು ಮತ್ತಷ್ಟೂ ಹೆಚ್ಚತೊಡಗಿದವು. ಇಷ್ಟರಲ್ಲೇ ಪತಿ ಬಸಣ್ಣ ಶಿರವಾಟಿ ಮೃತಪಟ್ಟ ಮೇಲೆ ಮಾರೆಮ್ಮ ಏಕಾಂಗಿ ಜೀವನ ನಡೆಸಿದ್ದರು. 2015ರಲ್ಲಿ ರಾಜ್ಯ ಸರ್ಕಾರ ಮಾರೆಮ್ಮ ಅವರ ಬುರ್ರಾ ಕಥೆ ಕಲೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಷ್ಟರಲ್ಲಿ ಆಸ್ತಮಾ ರೋಗ ಮಾರೆಮ್ಮ ಅವರನ್ನು ಆಗಾಗ ಕಾಡಿಸುತ್ತಿತ್ತು.

‘ಪ್ರಶಸ್ತಿ ಜತೆಗೆ ₹1 ಲಕ್ಷ ನಗದು, 20 ಗ್ರಾಂ ಬಂಗಾರ, 24 ತೊಲೆ ಬೆಳ್ಳಿ ನೀಡಲಾಗಿತ್ತು. ನಗದನ್ನು ಚಿಕಿತ್ಸೆಗಾಗಿ ಸಂಪೂರ್ಣ ವ್ಯಯಿಸಿದ್ದರೂ ಆಸ್ತಮಾದಿಂದ ಗುಣಮುಖರಾಗಿರಲಿಲ್ಲ. ಪ್ರಶಸ್ತಿ, ನಗದು ಸಿಕ್ಕ ಮೇಲೆ ಒಂದೆಡೆ ಶಾಶ್ವತವಾಗಿ ನೆಲೆನಿಂತು ಒಂದು ಸಣ್ಣ ಸೂರು ಕಟ್ಟಿಕೊಳ್ಳುವ ಕನಸನ್ನು ಮಾರೆಮ್ಮ ಕಂಡಿದ್ದರು. ಆದರೆ, ಅವರಿಗೆ ಸರ್ಕಾರ ನಿವೇಶನ ನೀಡಿರಲಿಲ್ಲ. ಜಿಲ್ಲಾಡಳಿತಕ್ಕೂ ಅರ್ಜಿ ಗುಜರಾಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೂ ಕೌದಿಯ ಗುಡಿಸಲಿನಲ್ಲೇ ಅಭಿಜಾತ ಕಲಾವಿದೆ ಕೊನೆಯುಸಿರೆಳೆದಿದ್ದಾರೆ’ ಎಂದು ಸಾಹಿತಿ ಚಿಂತಕರಾದ ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ್‌ ಹೇಳುತ್ತಾರೆ.
**
ಜೀವನದ ಸಂಕಷ್ಟಗಳನ್ನೇ ಕಥೆಯ ರೂಪದಲ್ಲಿ ಹೇಳುವ ಕಠಿಣ ಕಲೆ ಬುರ‍್ರಾ ಕಥೆ. ಬದುಕಿನ ಏಳು ಬೀಳಿನ ಸಾರಾಂಶವನ್ನು ಈ ಕಲೆ ಒಳಗೊಂಡಿರುತ್ತದೆ.
– ಡಾ.ಎಸ್‌.ಎಸ್.ನಾಯಕ, ಇತಿಹಾಸ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.