ADVERTISEMENT

‘ಕ್ಷೇತ್ರದ ಸೇವೆ ಮಾಡಲು ಬೆಂಬಲಿಸಿ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 13:28 IST
Last Updated 25 ಏಪ್ರಿಲ್ 2018, 13:28 IST

ಸುರಪುರ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಅವರು ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಡೆವಿಡ್ ಅವರಿಗೆ ಮಂಗಳವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.

ಸಹಾಯಕ ಚುನಾವಣಾಧಿಕಾರಿ ಸುರೇಶ ಅಂಕಲಗಿ, ಚುನಾವಣೆ ಶಿರಸ್ತೇದಾರ್ ಅಶೋಕ ಸುರಪುರಕರ್, ಪ್ರೊಬೇಷನರಿ ತಹಶೀಲ್ದಾರ್ ಲಿಂಗಣ್ಣ ಬಿರಾದಾರ್, ಲೆಕ್ಕಾಧಿಕಾರಿ ವೆಂಕಟೇಶ ಹೋತಪೇಟೆ ಇದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಗೆ ಜನಸಾಗರವೇ ಹರಿದು ಬಂದಿತ್ತು. ಕ್ಷೇತ್ರದ ವಿವಿಧ ಗ್ರಾಮಗಳಿಂದ ಟ್ರ್ಯಾಕ್ಟರ್, ಕ್ರೂಸರ್‌ಗಳಲ್ಲಿ ಸಾವಿರಾರು ಕಾರ್ಯಕರ್ತರು ಬಂದಿದ್ದರು.ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಿಂದ ತಹಶೀಲ್ದಾರ್‌ ಕಚೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಿಂದಾಗಿ ಸುಮಾರು ಎರಡು ಗಂಟೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ನೂರಾರು ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದು, ಕಂಡುಬಂತು.

ADVERTISEMENT

ಗಾಂಧಿ ವೃತದಲ್ಲಿ ರಾಜೂಗೌಡ ಅವರ ಪುತ್ರ ಮಣಿಕಂಠ ಮಾತನಾಡಿ, ‘ನನ್ನ ತಂದೆ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕಳೆದ ಬಾರಿ ತಾವು ನೀಡಿದ ತೀರ್ಪಿಗೆ ನಾವು ತಲೆ ಬಾಗಿದ್ದೇವೆ. ಈಗ ಮತ್ತೆ ತಮ್ಮ ಬಳಿ ಬಂದಿದ್ದೇವೆ. ಈ ಬಾರಿ ನನ್ನ ತಂದೆಗೆ ಮತ ನೀಡಿ ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆ ನಂತರ ರಾಜೂಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಜನರು ಮೆಚ್ಚಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ಜನ ಎದುರು ನೋಡುತ್ತಿದ್ದಾರೆ’ ಎಂದು ತಿಳಿಸಿದರು.

‘ಕ್ಷೇತ್ರದಲ್ಲಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ’ ಎಂದು ದೂರಿದರು.ಯಲ್ಲಪ್ಪ ಕುರುಕುಂದಿ, ಸುರೇಶ ಸಜ್ಜನ್, ಮರಿಲಿಂಗಪ್ಪ ನಾಯಕ ಕರ್ನಾಳ, ಗ್ಯಾನಚಂದ ಜೈನ್, ಬಸವರಾಜ ಸ್ಥಾವರಮಠ, ದೊಡ್ಡ ದೇಸಾಯಿ ದೇವರಗೋನಾಲ, ಸಂಗಣ್ಣಗೌಡ ವಜ್ಜಲ್, ರಾಜು ಹವಲ್ದಾರ್, ಪರಮಣ್ಣ ಪೂಜಾರಿ, ವಿರೇಶ ಚಿಂಚೋಳಿ, ಮೇಲಪ್ಪ ಗುಳಗಿ, ವಕೀಲರಾದ ಅಪ್ಪಾಸಾಹೇಬ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.