ADVERTISEMENT

ಜಾನುವಾರುಗಳಿಗೆ ಸಿಗದ ಚಿಕಿತ್ಸೆ; ಆತಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:17 IST
Last Updated 19 ಮೇ 2017, 6:17 IST

ಯಾದಗಿರಿ: ವಿವಿಧ ಬೇಡಿಕೆ ಈಡೇರಿ ಸುವಂತೆ ಪಶುವೈದ್ಯರು, ಸಿಬ್ಬಂದಿ ಆಸ್ಪತ್ರೆಗಳ ಕದಮುಚ್ಚಿ ಪ್ರತಿಭಟನೆ ಗಿಳಿದಿದು ಮೂರು ದಿನ ಕಳೆದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ರೈತಾಪಿ ಜನರು ಜಾನುವಾರುಗಳನ್ನು ಕಳೆದು ಕೊಳ್ಳು ವಂತಹ ಸಂಕಷ್ಟ ಸ್ಥಿತಿ ಎದುರಾಗಿದೆ.

ಜಿಲ್ಲೆಯ ಹಿರೇವಡಗೇರಾ, ಹಾಲ ಗೇರಾ, ಬೆಂಡೆಬೆಂಬಳಿ, ಗೋನಾಲ, ಗೊಂದೆನೂರ, ಗುರುಮಠಕಲ್‌ನ ಚಂಡ್ರಕಿ, ಕೊಂಕಲ್, ಚಪೆಟ್ಲಾ ಗ್ರಾಮ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಗಳಿವೆ. ಇಲ್ಲಿನ ಪಶು ಚಿಕಿತ್ಸಾಲಯಗಳು ಮುಚ್ಚಿರುವುದರಿಂದ  ಗ್ರಾಮೀಣ ಭಾಗದ ಜಾನುವಾರುಗಳಿಗೆ ಚಿಕಿತ್ಸೆ ಇಲ್ಲದಂತಾಗಿದೆ.

ಪಶು ಇಲಾಖೆ ವರದಿ ಪ್ರಕಾರ, ಜಿಲ್ಲೆಯಲ್ಲಿ 99 ಪಶು ವೈದ್ಯ ಸಂಸ್ಥೆಗಳು ಇವೆ. ಒಟ್ಟು 11,02,414 ಜಾನುವಾರು ಗಳಿವೆ. ಗುರುಮಠಕಲ್‌ ಮತಕ್ಷೇತ್ರದ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಸ್ವಲ್ಪ ಹೆಚ್ಚಿದೆ.

ADVERTISEMENT

‘ಜಾನುವಾರುಗಳಿಗೆ ಒಂದಲ್ಲಾ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಬೇಸಿಗೆಯಲ್ಲಿ ಉಷ್ಣಾಂಶ ಅಧಿಕ ಇರುವುದರಿಂದ ಎಲ್ಲಾ  ಕಡೆಗಳಲ್ಲಿ ಜಾನುವಾರುಗಳಿಗೆ ಜ್ವರಬಾಧೆ ಹೆಚ್ಚಿರುತ್ತದೆ. ಜ್ವರಕ್ಕೆ ತಕ್ಷಣ ಚುಚ್ಚುಮದ್ದು ಸಿಗದಿದ್ದರೆ ಜಾನುವಾರುಗಳ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ’ ಎಂದು ರೈತರಾದ ಶಂಕರಪ್ಪ ಮತ್ತು ಮಹಮ್ಮದ್‌ ಹುಸೇನ್ ತಿಳಿಸಿದರು.

‘99 ಪಶುವೈದ್ಯ ಸಂಸ್ಥೆಗಳಲ್ಲಿ ನಿತ್ಯ10 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಪ್ರಸವ ಚಿಕಿತ್ಸೆ ನಡೆಸಲಾಗುತ್ತದೆ, ಜತೆಗೆ ಸಂತಾನವೃದ್ಧಿ ಚಿಕಿತ್ಸೆಯೂ ಇರುತ್ತದೆ. ಈಗ ಪಶುವೈದ್ಯಕೀಯ ಸಂಸ್ಥೆಗಳು ಕದಮುಚ್ಚಿರುವ ಕಾರಣ ಜಾನುವಾರು ಗಳಿಗೆ ಈ ಚಿಕಿತ್ಸೆಗಳು ದೊರೆಯ ದಂತಾಗಿದೆ’ ಎಂದು ಪಶು ಇಲಾಖೆ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಸಿಗೆಗಾಲದಲ್ಲಿ ಸಹಜವಾಗಿ ಜಾನುವಾರುಗಳಿಗೆ ಚೆಪ್ಪೆ ಬೇನೆ, ಗಂಟಲು ರೋಗ, ಕುಂದುರೋಗ  ಮಾರಿಗಳು ಬರುತ್ತವೆ. ಈ ರೋಗಗಳಿಂದ ಬಳಲುವ ರಾಸುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ದೊರಕದಿದ್ದರೆ ದುಬಾರಿ ಬೆಲೆಯ ದನಕರುಗಳು ಸಾವನ್ನಪ್ಪಿ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಾರೆ’ ಎಂದು  ರೈತರಾದ  ನಾಯ್ಕಲ್‌ ಗ್ರಾಮದ ಅಣ್ಣಯ್ಯ, ಖಲೀಲ್ ಸಾಬ್‌ ತಿಳಿಸಿದರು.

‘ಅತಿಯಾದ ಬಿಸಿಲಿನಿಂದ ಕುರಿಗಳಿಗೆ ಬಹುಬೇಗ ಜ್ವರ ಕಾಣಿಸಿಕೊಳ್ಳುತ್ತದೆ. ತಕ್ಷಣಕ್ಕೆ ಚಿಕಿತ್ಸೆ ಸಿಗದಿದ್ದರೆ ಕುರಿಗಳು ಸಾಮೂಹಿಕವಾಗಿ ಸಾಯುವ ಸಾಧ್ಯತೆ ಇರುತ್ತದೆ. ಸರ್ಕಾರ ಕೂಡಲೇ ಪಶುವೈದ್ಯರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಸಿಬ್ಬಂದಿ ನೇಮಕ ಮಾಡಿ ಜಾನುವಾರುಗಳಿಗೆ ಚಿಕಿತ್ಸೆ ಸಿಗುವಂತೆ ಕ್ರಮಕೈಗೊಳ್ಳಬೇಕು’ ಎಂದು  ಗುರುಮಠಕಲ್ ಪುಟಪಾಕ ಗ್ರಾಮದ ಕುರಿಗಾಹಿ ಸಾಬಪ್ಪ ತಿಳಿಸಿದರು.

ಬೇಡಿಕೆ ಈಡೇರುವ ನಿರೀಕ್ಷೆ
‘ಮಾನವೀಯ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಸೇವೆ ನೀಡುವಂತೆ ಮನವಿ ಮಾಡಿದ್ದೇನೆ. ಈವರೆಗೂ ಅಂತಹ ಸಮಸ್ಯೆಗಳು ರೈತರಿಂದ ಬಂದಿಲ್ಲ. ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ ವೇಳೆ ವೈದ್ಯರ ಬೇಡಿಕೆ ಸರ್ಕಾರ ಈಡೇರಿಸುವ ನಿರೀಕ್ಷೆಯಿದೆ.

ಸಮಸ್ಯೆ ಜಟಿಲಗೊಂಡರೆ ಜಿಲ್ಲೆಯಲ್ಲಿ ಒಟ್ಟು 15 ಮಂದಿ ನಿವೃತ್ತ ವೈದ್ಯರಿದ್ದಾರೆ. ಅವರಿಂದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವ ಪೂರ್ವಾಯೋಜನೆ ಇದೆ’ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ರಾಜಶೇಖರ್ ತಿಳಿಸಿದರು.

*

ಸಿಬ್ಬಂದಿ ಮುಷ್ಕರದಿಂದ ಜಾನುವಾರುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗ ಸರ್ಕಾರ ಮುಷ್ಕರ ನಿಲ್ಲಿಸಬೇಕು.
ಯಂಕಣ್ಣ ಬಸಂತಪೂರ
ರೈತ, ವಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.